ಬೆಂಗಳೂರು: ಹಲವು ವರ್ಷಗಳ ನಂತರ ಕೈಗಾರಿಕೆಗಳಿಗೆ ಬೇಕಾದ ಅಗತ್ಯ ಕೌಶಲ್ಯದ ಕೊರತೆಯಿಂದ ಬಳಲುತ್ತಿರುವ ಉತ್ತರ ಕರ್ನಾಟಕದ ವಿದ್ಯಾರ್ಥಿಗಳಿಗೆ ಇದೊಂದು ಸಿಹಿ ಸುದ್ದಿ. ಇದೀಗ ಹುಬ್ಬಳ್ಳಿಯಲ್ಲೇ ದೇಶದ ಅತಿ ದೊಡ್ಡ ಕೌಶಲ್ಯ ಅಭಿವೃದ್ಧಿ ಕೇಂದ್ರ ಸ್ಥಾಪನೆಯಾಗುತ್ತಿದೆ.
ದೇಶಪಾಂಡೆ ಫೌಂಡೇಶನ್ ಹುಬ್ಬಳ್ಳಿಯಲ್ಲಿ ದೇಶದ ಅತಿ ದೊಡ್ಡ ಕೌಶಲ್ಯ ಅಭಿವೃದ್ಧಿ ಕೇಂದ್ರ ಸ್ಥಾಪಿಸುತ್ತಿದೆ.
ಈ ಬಗ್ಗೆ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಫೌಂಡೇಶನ್ ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ನವೀನ್ ಜಾ ಅವರು, ಉತ್ತರ ಕರ್ನಾಟಕದ ವಿದ್ಯಾರ್ಥಿಗಳಲ್ಲಿ ಕೈಗಾರಿಕೆಗಳಿಗೆ ಬೇಕಾದ ಕೌಶಲ್ಯದ ಕೊರತೆ ಇದೆ. ಹೀಗಾಗಿ ಹುಬ್ಬಳ್ಳಿಯಲ್ಲಿಯೇ ಈ ಕೇಂದ್ರವನ್ನು ಸ್ಥಾಪಿಸಲು ನಿರ್ಧರಿಸಲಾಯಿತು ಎಂದರು.
ನಮ್ಮ ಕೇಂದ್ರ ಸಣ್ಣ ನಗರ ಮತ್ತು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಹೆಚ್ಚಿನ ಆದ್ಯತೆ ನೀಡಿ, ಅವರಿಗೆ ಉತ್ತಮ ಕೌಶಲ್ಯ ತರಬೇತಿ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಕಳೆದ ವರ್ಷ ಮೇನಲ್ಲಿ ಕೌಶಲ್ಯ ಅಭಿವೃದ್ಧಿ ಕೇಂದ್ರದ ಕಾಮಗಾರಿ ಆರಂಭವಾಗಿದ್ದು, ಈ ಮಾರ್ಚ್ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ ಮತ್ತು ಏಪ್ರಿಲ್ ನಿಂದ ತರಬೇತಿ ಕಾರ್ಯಕ್ರಮಗಳು ಆರಂಭವಾಗಲಿವೆ ಎಂದು ಜಾ ಹೇಳಿದ್ದಾರೆ.