ರಾಜ್ಯ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಆಪ್ತ ಶಾಸಕನ ಮನೆಯಲ್ಲಿ 120 ಕೋಟಿ ರು ಮೌಲ್ಯದ ಆಸ್ತಿ ಪತ್ತೆ

Shilpa D

ಬೆಂಗಳೂರು: ಕಾಂಗ್ರೆಸ್ ಶಾಸಕ ಎಂಟಿಬಿ ನಾಗರಾಜ್ ಅವರ ಮನೆಯಲ್ಲಿ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದ ವೇಳೆ ಸುಮಾರು 120 ಕೋಟಿ ರು ಮೌಲ್ಯದ ಆಸ್ತಿ ಪತ್ತೆಯಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಹೊಸಕೋಟೆ ಕ್ಷೇತ್ರದ ಶಾಸಕ ಎಂಟಿಬಿ ನಾಗರಾಜ್ ಅವರ ಗರುಡಾಚಾರ್ ಪಾಳ್ಯದಲ್ಲಿರುವ ಮನೆ ಮೇಲೆ ಫೆಬ್ರವರಿ 9ರಂದು  ಐಟಿ ಅಧಿಕಾರಿಗಳ ದಾಳಿ ವೇಳೆ 10 ಕೆಜಿ ಚಿನ್ನ,  ಮತ್ತು ದಾಖಲೆಗಳಿಲ್ಲದ 1.10 ಕೋಟಿ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ.

ಆಸ್ತಿ ಮಾಲೀಕತ್ವ ಮತ್ತು  ಬಂಡವಾಳ ಹೂಡಿಕೆಗೆ ಸಂಬಂಧಿಸಿದ ಹಲವು ಮಹತ್ವದ ದಾಖಲೆಗಳನ್ನು ದಾಳಿ ವೇಳೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದು, ಅವುಗಳ ಪರಿಶೀಲನೆ ಮುಂದುವರಿದಿದೆ ಎಂದು ಮೂಲಗಳು ತಿಳಿಸಿವೆ.
ನಾಗರಾಜ್‌ ಮತ್ತು ಅವರ ಕುಟುಂಬದ ಸದಸ್ಯರು ಹೊಂದಿದ ಆಸ್ತಿ  ಮೌಲ್ಯ ರು. 120 ಕೋಟಿಗೂ ಹೆಚ್ಚು ಎನ್ನುವ ಅಂಶವನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ.

ಆಸ್ಪತ್ರೆ, ವಾಸದ ಮನೆ ಮೇಲೆ ಭಾರಿ ಮೊತ್ತದ ಹಣ ಹೂಡಿಕೆ ಮಾಡಿರುವ ಅವರು, ತೆರಿಗೆ ತಪ್ಪಿಸುವ ಉದ್ದೇಶದಿಂದ ಯಾವುದೇ ಭದ್ರತೆ ಇಲ್ಲದ ನಕಲಿ ಸಾಲ ಪತ್ರ ಸೃಷ್ಟಿಸಿರುವುದು ಗೊತ್ತಾಗಿದೆ. ವಾಣಿಜ್ಯ ಸಂಕೀರ್ಣಗಳ ನಿರ್ಮಾಣ ಸೇರಿದಂತೆ ಆಸ್ತಿ ವ್ಯವಹಾರದಲ್ಲಿ ನಾಗರಾಜ್‌ ಅವರು ಕೋಟ್ಯಂತರ ಹಣ ಹೂಡಿಕೆ ಮಾಡಿದ್ದಾರೆ. ಅಲ್ಲದೆ, ವಿವಿಧ ಭೂ ಮಾಲೀಕರು ರು. 70 ಕೋಟಿಗೂ ಹೆಚ್ಚು ಹಣ ಮರುಪಾವತಿಸಿರುವ ದಾಖಲೆಗಳೂ ಮನೆಯಲ್ಲಿ ಸಿಕ್ಕಿವೆ ಎಂದು ಮೂಲಗಳು ತಿಳಿಸಿವೆ.

ನಾಗರಾಜ್‌ ಅವರು ವಿಶೇಷ ಆರ್ಥಿಕ ವಲಯ (ಎಸ್‌ಇಝೆಡ್‌) ಸ್ಥಾಪಿಸುವ ಉದ್ದೇಶದಿಂದ ಹಲವು ವರ್ಷಗಳ ಹಿಂದೆ ರು. 125 ಕೋಟಿಗೂ ಹೆಚ್ಚು ಮೊತ್ತಕ್ಕೆ ತೆರಿಗೆ ವಿನಾಯಿತಿ ಪಡೆದಿರುವ ದಾಖಲೆ ಪತ್ತೆಯಾಗಿದೆ. ಆದರೆ ಇದು ಸುಳ್ಳು ಎಂಬ ಅಂಶವೂ ಅಧಿಕಾರಿಗಳ ಗಮನಕ್ಕೆ ಬಂದಿದೆ. ನಾಗರಾಜ್‌ ಅವರ ಒಡೆತನದಲ್ಲಿರುವ 3,500 ಆಸ್ತಿಗಳ ದಾಖಲೆ ಪತ್ರಗಳೂ ಪತ್ತೆಯಾಗಿವೆ. ಈ ಎಲ್ಲ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ ಎಂದೂ ಮೂಲಗಳು ತಿಳಿಸಿವೆ.

ಕಳೆದ  ತಿಂಗಳು ಕಾಂಗ್ರೆಸ್ ಮುಖಂಡರಾದ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ರಮೇಶ್ ಜಾರಕಿ ಅವರ ಮನೆ ಮೇಲೆ ದಾಳಿ ನಡೆಸಿದ್ದ ಆದಾಯ ತೆರಿಗೆ ಇಲಾಖೆ 162 ಕೋಟಿ ರು ಅಕ್ರಮ ಆಸ್ತಿ ಪತ್ತೆ ಮಾಡಿತ್ತು.

SCROLL FOR NEXT