ಲೈಂಗಿಕ ಕಿರುಕುಳ ಆರೋಪದ ಹಿನ್ನೆಲೆಯಲ್ಲಿ ತಾತ್ಕಾಲಿಕ ಬಂದ್ ಆಗಿರುವ ಬೆಳ್ಳಂದೂರಿನ ಕಿಡ್ಜಿ ಶಾಲೆ
ಬೆಂಗಳೂರು: ನಗರದ ಪ್ರಮುಖ ಪೂರ್ವ ಪ್ರಾಥಮಿಕ ಶಾಲೆಯೊಂದರಲ್ಲಿ ಮೂರು ವರ್ಷದ ಮಗುವಿನ ಮೇಲೆ ನಡೆದ ಲೈಂಗಿಕ ಕಿರುಕುಳಕ್ಕೆ ಸಂಬಂಧಪಟ್ಟಂತೆ ನಡೆಸಲಾದ ತನಿಖೆಯಿಂದ ಶಾಲೆಯ ಕಾರ್ಯವೈಖರಿಯ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
ಶಾಲೆಯ ಸಿಬ್ಬಂದಿ ತುಂಟ ಮಕ್ಕಳನ್ನು ಮೇಲ್ವಿಚಾರಕ ಮಂಜುನಾಥ್ ಬಳಿಗೆ ಶಿಸ್ತನ್ನು ಕಲಿಸಲು ಕಳುಹಿಸುತ್ತಿದ್ದರಂತೆ. ಪ್ರಕರಣದ ಆರೋಪಿ ಮಂಜುನಾಥ್ ಆಗಿದ್ದು, ದುರಂತವೆಂದರೆ ಆತನೇ ಸಿಸಿಟಿವಿ ನಿರ್ವಹಣೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದುದು.
ಇದೀಗ ಶಾಲೆಯ ಮಕ್ಕಳ ಬಹುಪಾಲು ಪೋಷಕರು ಶಾಲೆಯ ವಿರುದ್ಧ ದೂರು ನೀಡಲು ಮುಂದೆ ಬಂದಿದ್ದಾರೆ. ಮೊನ್ನೆ ಮಂಗಳವಾರ ಕೆಲವರು ತಮ್ಮ ಮಕ್ಕಳನ್ನು ವೈದ್ಯರ ಬಳಿ ತಪಾಸಣೆಗೆ ಕರೆದೊಯ್ದಿದ್ದರು. ಕೆಲವು ಶಿಕ್ಷಕಿಯರು ಮತ್ತು ಆಯಾಗಳು ಮಕ್ಕಳು ಗಲಾಟೆ ಮಾಡಿದರೆ, ಊಟ ತಿಂಡಿ ಮಾಡದಿದ್ದರೆ, ಮಂಜುನಾಥ್ ಬಳಿ ಕಳುಹಿಸುವುದಾಗಿ ಬೆದರಿಸುತ್ತಿದ್ದರಂತೆ ಎಂದು ತನಿಖೆ ವೇಳೆ ತಿಳಿದುಬಂದಿದೆ.
ಕೆಲ ಮಕ್ಕಳು ಈ ವಿಷಯವನ್ನು ಪೋಷಕರಿಗೆ ತಿಳಿಸಿದ್ದರು. ಮಂಜುನಾಥ್ ಕೆಟ್ಟ ವ್ಯಕ್ತಿಯಾಗಿದ್ದು, ನಾವು ಆತನ ಬಳಿಗೆ ಹೋಗಲು ಇಷ್ಟಪಡುವುದಿಲ್ಲ ಎಂದು ಮಕ್ಕಳು ಹೇಳುತ್ತಿದ್ದರಂತೆ.
ಆ ಶಾಲೆಯಲ್ಲಿ ಮಂಜುನಾಥ್ ಒಬ್ಬರೇ ಪುರುಷ ಬೋಧಕೇತರ ಸಿಬ್ಬಂದಿಯಾಗಿದ್ದು, ಆತ ಶಾಲೆ ಮತ್ತು ಡೇ ಕೇರ್ ನಲ್ಲಿ ಸಿಸಿಟಿವಿ ನಿರ್ವಹಣೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಸಿಸಿಟಿವಿಯಲ್ಲಿ ಅಂತಹ ಯಾವುದೇ ದೃಶ್ಯಗಳಿಲ್ಲ ಎಂದು ಪ್ರಾಂಶುಪಾಲರು ಹೇಳುತ್ತಿದ್ದು, ಆತನೇ ಸಿಸಿಟಿವಿ ಉಸ್ತುವಾರಿ ನೋಡಿಕೊಳ್ಳುತ್ತಿರುವಾಗ ಸಾಕ್ಷ್ಯಗಳನ್ನು ಹೇಗೆ ತಾನೆ ಉಳಿಸಲು ಸಾಧ್ಯ, ನಾಶಪಡಿಸಿರುತ್ತಾನೆ ಅಲ್ಲವೇ ಎಂದು ಪೋಷಕರೊಬ್ಬರು ಕೇಳುತ್ತಾರೆ.
ಈ ಮುಂಚೆ ಕೆಲವೊಮ್ಮೆ ಮಕ್ಕಳು ಮಂಜುನಾಥ್ ಬಗ್ಗೆ ದೂರು ನೀಡಿದಾಗ ಅದನ್ನು ನಿರ್ಲಕ್ಷಿಸುತ್ತಿದ್ದರಂತೆ. ಬೆಳಗ್ಗೆ 9ರಿಂದ ಸಾಯಂಕಾಲ 6 ಗಂಟೆಯವರೆಗೆ ಶಾಲೆಯಲ್ಲಿರುತ್ತಿದ್ದ ಮಂಜುನಾಥ್ ಸಾರಿಗೆ ವ್ಯವಸ್ಥೆಯ ಉಸ್ತುವಾರಿಯನ್ನು ಕೂಡ ನೋಡಿಕೊಳ್ಳುತ್ತಿದ್ದ.
ಆಯಾಗಳು ಮಕ್ಕಳ ಬಟ್ಟೆಯನ್ನು ಆತನ ಮುಂದೆಯೇ ಬದಲಾಯಿಸುತ್ತಿದ್ದರಂತೆ. ಕೆಲವು ಹೆಣ್ಣು ಮಕ್ಕಳಿಗೆ ಆತನೇ ಬಟ್ಟೆ ಬದಲಾಯಿಸುತ್ತಿದ್ದನು ಎಂದು ಮಕ್ಕಳು ಹೇಳುತ್ತಾರೆ.
ಕೆಲ ದಿನಗಳ ಹಿಂದೆ ಬೆಳ್ಳಂದೂರಿನ ಈ ಶಾಲೆಯ ಹೆಣ್ಣು ಮಗುವಿನ ಮೇಲೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಮೇಲ್ವಿಚಾರಕ ಮಂಜುನಾಥ್ ನನ್ನು ಬಂಧಿಸಲಾಗಿದೆ.