ರಾಜ್ಯ

ಕಾಳಿ ಹುಲಿ ಸಂರಕ್ಷಿತಾರಣ್ಯದಲ್ಲಿ ಎಗ್ಗಿಲ್ಲದೇ ನಡೆಯುತ್ತಿದೆ "ಅಕ್ರಮ" ಅಭಿವೃದ್ಧಿ ಕಾರ್ಯ!

Srinivasamurthy VN

ಕಾರವಾರ: ವರ್ಷದ ಹಿಂದಷ್ಟೇ ಮರು ನಾಮಕರಣಗೊಂಡ ಕಾಳಿ ಹುಲಿ ಸಂರಕ್ಷಿತಾರಣ್ಯ (ದಾಂಡೇಲಿ–ಅಣಶಿ ಹುಲಿ ಸಂರಕ್ಷಿತಾರಣ್ಯ) ಪ್ರದೇಶದಲ್ಲಿ ಅಕ್ರಮವಾಗಿ ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗುತ್ತಿದ್ದು, ಇದರಿಂದ ಇಲ್ಲಿನ  ಪ್ರಾಣಿಗಳ ಜೀವನ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ಹೇಳಲಾಗುತ್ತಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಕಾರವಾರದ ಸಮೀಪ ಇರುವ ಕಾಳಿ ಹುಲಿ ಸಂರಕ್ಷಿತಾರಣ್ಯ ಪ್ರದೇಶ ಸಮೀಪದಲ್ಲಿ ಅಕ್ರಮವಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುತ್ತಿರುವ ಕುರಿತು ಈ ಹಿಂದೆಯೂ ಸಾಕಷ್ಟು ಬಾರಿ ವರದಿ  ನೀಡಲಾಗಿತ್ತಾದರೂ ವರದಿ ಕುರಿತಂತೆ ಈ ವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಅಸಮಾಧಾನ ವ್ಯಕ್ತಪಡಿಸಿದೆ. ಪ್ರಕರಣದಲ್ಲಿ ಸ್ಥಳೀಯ ರಾಜಕಾರಣಿಗಳ ಪ್ರಭಾವವಿದ್ದು, ತಮ್ಮ  ರಾಜಕೀಯ ಉದ್ದೇಶಕ್ಕಾಗಿ ಇಲ್ಲಿನ ಜೈವಿಕ ಪರಿಸರಕ್ಕೆ ಹಾನಿ ಮಾಡುತ್ತಿದ್ದಾರೆ ಎಂದು ಹೇಳಿದೆ.

ದಾಂಡೇಲಿ-ಅಣಶಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆಯ ಅನುಮತಿ ಇಲ್ಲದೇ ವಿದ್ಯುತ್ ದೀಪಗಳು ಮತ್ತು ರಸ್ತೆ ಅಗಲೀಕರಣ ಕಾರ್ಯ ನಡೆಯುತ್ತಿದೆ. ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಯಾವುದೇ ರೀತಿಯ ಅಭಿವೃದ್ಧಿ  ಕಾರ್ಯಗಳನ್ನು ಕೈಗೊಳ್ಳುವ ಮುನ್ನ ಕೇಂದ್ರ ಅರಣ್ಯ ಇಲಾಖೆಯ ಅನುಮತಿ ಪಡೆಯಬೇಕಿದೆ. ಆದರೆ ಪ್ರಸ್ತುತ ನಡೆಯುತ್ತಿರುವ ಕಾರ್ಯಗಳಿಗೆ ಯಾವುದೇ ರೀತಿಯ ಅನುಮೋದನೆ ಪಡೆಯಲಾಗಿಲ್ಲ. ಸ್ಥಳೀಯ ಅರಣ್ಯಾಧಿಕಾರಿಗಳು  ತಪ್ಪು ಮಾಹಿತಿ ನೀಡಿ ಅಧಿಕಾರಿಗಳ ದಾರಿತಪ್ಪಿಸಿದ್ದಾರೆ. ಕೇಂದ್ರದ ತಂಡ ವೀಕ್ಷಣೆಗೆ ತೆರಳಿ ವರದಿ ನೀಡಿದಾಗ ಈ ವಿಚಾರ ಬೆಳಕಿಗೆ ಬಂದಿದೆ. ಸ್ಥಳೀಯ ರಾಜಕಾರಣಿಗಳ ಪ್ರಭಾವಕ್ಕೆ ಒಳಗಾಗಿ ಅಧಿಕಾರಿಗಳು ತಪ್ಪು ಮಾಹಿತಿ  ನೀಡಿದ್ದಾರೆ ಎಂದು ಕೇಂದ್ರ ಅರಣ್ಯ ಇಲಾಖೆ ಅಧಿಕಾರಿಗಳು ಆರೋಪಿಸಿದ್ದಾರೆ.

ದಾಂಡೇಲಿ-ಅಣಶಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ವಿದ್ಯುತ್ ಕಂಬಗಳು, ರಸ್ತೆಗಳು, ಸೇತುವೆ, ಪೈಪ್ ಲೈನ್, ರಸ್ತೆ ಉನ್ನತೀಕರಣ/ ರಸ್ತೆ ಅಗಲೀಕರಣ/ ರಸ್ತೆಗಳ ಪಕ್ಕದಲ್ಲಿ ಕಪ್ಪು ಪಟ್ಟಿ ಮತ್ತು ರಾಜ್ಯ ಹೆದ್ದಾರಿ ಉನ್ನತೀಕರಣ  ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗುತ್ತಿದೆ. ಆದರೆ ಈ ಕಾರ್ಯಗಳಿಗೆ ಲೋಕೋಪಯೋಗಿ ಇಲಾಖೆ ಕೇಂದ್ರೀಯ ಇಲಾಖೆಗಳ ಅನುಮತಿ ಪಡೆದಿಲ್ಲ.

ದಾಂಡೇಲಿ–ಅಣಶಿ ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಸುಮಾರು 20 ಹುಲಿಗಳು ವಾಸವಿದ್ದು, ಪ್ರಸ್ತುತ ನಡೆಯುತ್ತಿರುವ ಅಕ್ರಮ ಅಭಿವೃದ್ಧಿ ಕಾರ್ಯಗಳಿಂದಾಗಿ ಅವುಗಳ ಜೀವನ ಪ್ರಕ್ರಿಯೆ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.  ವಿವಿಧ ಕಾರಣಗಳಿಂದಾಗಿ ಅವುಗಳ ಸಂತತಿ ಕೂಡ ನಾಶವಾಗುವ ಸಾಧ್ಯತೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

SCROLL FOR NEXT