ತಾವು ಅಭಿವೃದ್ಧಿಪಡಿಸಿದ ಸಾಧನ, ಬಲಚಿತ್ರದಲ್ಲಿ ಸಾಯಿ ರಾಹುಲ್ ಮತ್ತು ಗಿರೀಶ್
ಬೆಂಗಳೂರು: ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಕೃಷಿ ಕುಟುಂಬದಿಂದ ಬಂದ ಹುಡುಗ ಸಾಯಿ ರಾಹುಲ್. ಇಲ್ಲಿನ ಡೆಫೊಡಿಲ್ಸ್ ಕಾನ್ಸೆಪ್ಟ್ ಶಾಲೆಯಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾನೆ. ರಾಹುಲ್ ಗೆ ನೆನಪಿದ್ದಾಗಿನಿಂದ ಅವನ ತಂದೆ, ತಾತ ಭೂಮಿ ಉಳುವ ಕೆಲಸ ಮಾಡಿಕೊಂಡಿರುವವರು.
ರಾಯಚೂರು ಎಂದಾಕ್ಷಣ ನೆನಪಿಗೆ ಬರುವುದು ಬಿಸಿಲು ಹೆಚ್ಚು, ನೀರಿಗೆ ಕೊರತೆ. ಇಲ್ಲಿ ಅನೇಕ ಕೊಳಗಳಿವೆ, ಇಲ್ಲಿನ ರೈತರು ಪರ್ಯಾಯ ಆದಾಯವಾಗಿ ಮೀನು ಮತ್ತು ಸಿಗಡಿಗಳನ್ನು ಸಾಕುತ್ತಾರೆ. ಆದರೆ ಈ ಮೀನು, ಸಿಗಡಿಗಳ ಮೇಲೆ ರೈತರು ಬೆಳೆಗಳಿಗೆ ಸಿಂಪಡಣೆ ಮಾಡುವ ರಾಸಾಯನಿಕಗಳು ಮಳೆ ಬಂದಾಗ ತೊಳೆದು ಹೋಗಿ ಕೊಳಗಳನ್ನು ಸೇರುತ್ತವೆ. ಅಲ್ಲದೆ ಸಾಕಷ್ಟು ರಾಸಾಯನಿಕಗಳು ಅಂತರ್ಜಲವನ್ನು ಸೇರುತ್ತವೆ.
ಫಾಸ್ಫೇಟ್ ರಾಸಾಯನಿಕಗಳಲ್ಲಿ ಹೆಚ್ಚು ಸೇರ್ಪಡೆಯಾದಾಗ ಜೀರ್ಣಕ್ರಿಯೆ ತೊಂದರೆಗಳು ಬರುತ್ತವೆ. ಅಲ್ಲದೆ ಮನುಷ್ಯರು ವಯಸ್ಸಾದಂತೆ ಕಂಡುಬರುವುದು ಮತ್ತು ಪರಿಸರ ವ್ಯವಸ್ಥೆಗೆ ಹಾನಿಯನ್ನುಂಟುಮಾಡುತ್ತದೆ.
ಈ ಎಲ್ಲ ಸಮಸ್ಯೆಗಳಿಗೆ ಏನಾದರೊಂದು ಪರಿಹಾರ ಕಂಡುಹಿಡಿಯಲೇಬೇಕೆಂದು ರಾಹುಲ್ ಮನಸ್ಸಲ್ಲಿ ಓಡಾಡುತ್ತಿತ್ತು. ಅದಕ್ಕೆ ವೇದಿಕೆ ಸಿಕ್ಕಿದ್ದು ಯುರೇಕಾದವರು ಇತ್ತೀಚೆಗೆ ನಗರದಲ್ಲಿ ಏರ್ಪಡಿಸಿದ್ದ ಕಾರ್ಯಾಗಾರ. ರಾಹುಲ್ ಮತ್ತು ಆತನ ಸ್ನೇಹಿತ ಗಿರೀಶ್, ನೀರಿನಲ್ಲಿ ಸೇರಿರುವ ವಿಷಕಾರಿ ಅಂಶಗಳನ್ನು ಪತ್ತೆಹಚ್ಚಲು ಅಗ್ಗದ ಮತ್ತು ನಿಖರವಾದ ಕಲರಿಮೀಟರ್ ನ್ನು ವಿನ್ಯಾಸಗೊಳಿಸಿದ್ದಾರೆ.
ಇಂದು ಮಾರುಕಟ್ಟೆಯಲ್ಲಿ ಈ ಸಮಸ್ಯೆಗಳನ್ನು ಬಗೆಹರಿಸಲು ಹಲವು ಪರಿಹಾರಗಳಿವೆ. ಅವುಗಳಲ್ಲೊಂದು ಆಸ್ಕೋರ್ಬಿಕ್ ಆಮ್ಲದ ಒಂದು ವಿಧಾನ.
ಇದರ ವೆಚ್ಚ ತುಸು ಹೆಚ್ಚು. ಸಾಮಾನ್ಯವಾಗಿ ನೀರಿನಲ್ಲಿ ಫೊಲ್ಫೇಟ್ ಪ್ರಮಾಣವನ್ನು ಪತ್ತೆಹಚ್ಚಲು 7,000ದಷ್ಟು ವೆಚ್ಚವಾಗುತ್ತದೆ. ಸಣ್ಣ ರೈತರಿಗೆ ಇದನ್ನು ಭರಿಸುವುದು ಕಷ್ಟ. ಹಾಗಾಗಿ ಅತ್ಯಂತ ಕನಿಷ್ಟ 500 ರೂಪಾಯಿಗೆ ಸಾಧನವನ್ನು ತಯಾರಿಸಲು ಪ್ರಯತ್ನಿಸಿದೆವು. ಇದು ಅತ್ಯಂತ ಚಿಕ್ಕದಾಗಿದ್ದು, ಕೈಯಲ್ಲಿ ತೆಗೆದುಕೊಂಡು ಹೋಗಬಲ್ಲ, ಹಗುರ ಸಾಧನವಾಗಿದೆ. ತಾವು ವಿನ್ಯಾಸೊಳಿಸಿದ ಸಾಧನ ದೊಡ್ಡದಲ್ಲದಿದ್ದರೂ ರೈತರಿಗೆ ಉಪಯೋಗವಾಗಬಲ್ಲದು ಎನ್ನುತ್ತಾನೆ ರಾಹುಲ್.
ತಾವು ತಯಾರಿಸಿದ ಸಾಧನವನ್ನು ಮಾರುಕಟ್ಟೆಯಲ್ಲಿ ಪರಿಚಯಿಸಿ ಮಾರಾಟ ಮಾಡುವ ಪ್ರಯತ್ನ ರಾಹುಲ್ ಮತ್ತು ಗಿರೀಶ್ ರದ್ದು.