ಆಪಾದಿತರಲ್ಲಿ ಇಬ್ಬರಾದ ಮೊಹಮದ್ ಸಮೀರ್ (ಬಲ) ಮತ್ತು ಅಕ್ತರ್ ಅಹ್ಮದ್ (ನಡುವೆ)
ಬೆಂಗಳೂರು: ಅರಣ್ಯ ಪ್ರದೇಶದಲ್ಲಿ ಸಾಂಬಾರ್ ಜಿಂಕೆಗಳನ್ನು ಬೇಟೆಯಾಡುವ ಮೂಲಕ ೧೨ ಸದಸ್ಯರ ತಂಡ ಹೊಸವರ್ಷದ ಪ್ರಾರಂಭವನ್ನು ಹೇಯ ಕೃತ್ಯಕ್ಕೆ ಬಳಸಿತು. ಮೋಜು, ಮಾಂಸ ಮತ್ತು ಬಹುಮಾನಕ್ಕಾಗಿ ಈ ತಂಡ ಈ ಕೃತ್ಯವನ್ನೆಸಗಿದೆ ಎಂದು ಅರಣ್ಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಜಿಂಕೆಯ ಕೊಂಬು ಈ ಬಹುಮಾನವಾಗಿದ್ದು, ಶೂಟರ್ ಗೆ ಈ ಬಹುಮಾನವನ್ನು ನೀಡಲಾಗುತ್ತದೆ ಎನ್ನುತ್ತವೆ ಮೂಲಗಳು.
"ಪ್ರಾಣಿಯನ್ನು ಕೊಂದು, ಪ್ರಾದೇಶಿಕ ನಿವಾಸಿಗಳ ಸಹಾಯದಿಂದ ಅದನ್ನು ಸ್ವಚ್ಛಗೊಳಿಸಿ, ಕತ್ತರಿಸಿ, ಭಿನ್ನ ಚೀಲಗಳಲ್ಲಿ ತುಂಬಿಕೊಂಡು ಹೋಗುವುದು ಅವರ ಇರಾದೆಯಾಗಿತ್ತು. ಬೆಂಗಳೂರು ಮತ್ತು ಮೈಸೂರಿನಿಂದ ಬಂದವರಿಗೆ ಹೆಚ್ಚಿನ ಮಾಂಸ ದೊರೆಯುವುದಾಗಿತ್ತು ಮತ್ತು ಸಾಂಬಾರ್ ಮಾಂಸ ಬಹಳ ರುಚಿಕರ ಎಂದು ಪರಿಗಣಿಸಲಾಗುತ್ತದೆ" ಎನ್ನುತ್ತವೆ ಮೂಲಗಳು.
ಅಧಿಕಾರಿಗಳು ಹೇಳುವ ಪ್ರಕಾರ "ಈ ದುಷ್ಕರ್ಮಿಗಳನ್ನು ಹಿಡಿಯಲು ಅರಣ್ಯ ಅಧಿಕಾರಿಗಳು ಮತ್ತು ಪ್ರಾದೇಶಿಕ ವನ್ಯಜೀವಿ ಸಂರಕ್ಷಕ ಕಾರ್ಯಕರ್ತರಿಗೆ ಮೂರು ಘಂಟೆಗಳಿಗೂ ಹೆಚ್ಚಿನ ಕಾಲಾವಕಾಶ ಹಿಡಿಯಿತು. ಆರೋಪಿಗಳು ಈ ಹಿಂದೆಯೂ ಕಾಡುಪ್ರಾಣಿಗಳನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾರೆ ಮತ್ತು ಇದು ಅಪರಾಧ ಎಂದು ತಿಳಿದಿರಲಿಲ್ಲ ಎಂದು ಅವರು ಹೇಳಿದ್ದಾರೆ. ಅವರು ಮತ್ತೊಂದು ಸಾಂಬಾರ್ ಜಿಂಕೆಯನ್ನು ಕೊಲ್ಲಲು ಹುಡುಕುತ್ತಿರುವಾಗ ಅವರನ್ನು ಹಿಡಿಯಲಾಯಿತು" ಎನ್ನುತ್ತಾರೆ.
ಆಪಾದಿತರಲ್ಲಿ ಇಬ್ಬರಾದ ರಫೀಕ್ ಅಹ್ಮದ್ ಮತ್ತು ಮೊಹಮದ್ ಸಮೀರ್ ವೃತ್ತಿಪರ ಶೂಟರ್ ಗಳಯಾಗಿದ್ದು, ಈ ಗುಂಪಿನ ಮುಂದಾಳತ್ವ ವಹಿಸಿದ್ದರಲ್ಲದೆ ಅವರ ಬಳಿ ಪರವಾನಗಿ ಪಡೆದಿದ್ದ ಪಿಸ್ತೂಲುಗಳಿದ್ದವು ಎಂದು ಅರಣ್ಯ ಅಧಿಕಾರಿಗಳು ಹೇಳಿದ್ದಾರೆ.
"ಪ್ರಾದೇಶಿಕ ನಿವಾಸಿಗಳಾದ ಅರುಣ್, ಚೇತನ್, ಪ್ರಸನ್ನ ಮತ್ತು ಹರೀಶ್ ಕಾಡು ಪ್ರಾಣಿಗಳ ಚಲನವಲನವನ್ನು ಪತ್ತೆ ಹಚ್ಚಿ ಈ ಪ್ರವಾಸಿಗರಿಕೆ ಸಹಾಯ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ. ಆಪಾದಿತರು ಹಣ, ಸ್ವಲ್ಪ ಮಾಂಸ ಮತ್ತು ಮದ್ಯ ನೀಡುವ ಭರವಸೆ ನೀಡಿದ್ದಕ್ಕೆ ಈ ಕೃತ್ಯವೆಸಗಿದ್ದಾಗಿ ಅವರು ಹೇಳಿದ್ದಾರೆ" ಎಂದು ಮೂಲಗಳು ತಿಳಿಸಿವೆ.
"ವಿದ್ಯಾವಂತರಾಗಿರುವ ಈ ಆಪಾದಿತರು ಮಾಡಿರುವ ಈ ಕೃತ್ಯ ನಾಚಿಗೇಡು. ಅವರಿಗೆ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಬಗ್ಗೆ ಅರಿವಿತ್ತು ಹಾಗು ಕಾಡು ಪ್ರಾಣಿಗಳನ್ನು ಬೇಟೆಯಾಡುವುದು ಹಾಗು ಕೊಲ್ಲುವುದು ಕಾನೂನುಬಾಹಿರ ಎಂದು ತಿಳಿದಿತ್ತು" ಎಂದು ಈ ಕಾರ್ಯಾಚರಣೆಯ ಭಾಗವಾಗಿದ್ದ ಅರಣ್ಯ ಅಧಿಕಾರಿಯೊಬ್ಬರು ಹೇಳಿದ್ದಾರೆ.