ಚಾಮರಾಜನಗರ: ಮಂಗಳವಾರ ನಿಧನರಾದ ಸಹಕಾರಿ ಮತ್ತು ಸಕ್ಕರೆ ಸಚಿವ ಮಹದೇವ ಪ್ರಸಾದ್ ಅವರ ಅಂತ್ಯಕ್ರಿಯೆಯನ್ನು ಅವರ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯ ಹಾಲಹಳ್ಳಿಯಲ್ಲಿ ನಡೆಸಲಾಗುತ್ತಿದ್ದು, ಈಗಾಗಲೇ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ ಪೂರ್ಣಗೊಳಿಸಲಾಗಿದೆ.
ಮಹದೇವ ಪ್ರಸಾದ್ ಅವರ ಹಿರಿಯರ ಸಮಾಧಿ ಇರುವ ಜಾಗದಲ್ಲೇ ಮಹದೇವ ಪ್ರಸಾದ್ ಅವರ ಅಂತಿಮ ಕ್ರಿಯಾ ವಿಧಿ ನೆರವೇರಿಸಲು ಕುಟುಂಬವರ್ಗ ಸಿದ್ಧತೆ ನಡೆಸಿಕೊಂಡಿದ್ದು, ಅಂತ್ಯ ಕ್ರಿಯೆ ರಾಜಕೀಯ ಗಣ್ಯರು ಸೇರಿದಂತೆ ಹಲವರು ಪಾಲ್ಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಹಾಲಹಳ್ಳಿಯಲ್ಲಿರುವ ಮಹದೇವ ಪ್ರಸಾದ್ ಅವರ ಕುಟುಂಬದ ಫಾರ್ಮ್ ಹೌಸ್ ನಲ್ಲೇ ಮಹದೇವ ಪ್ರಸಾದ್ ಅವರ ಅಂತ್ಯಕ್ರಿಯೆ ನಡೆಸಲಾಗುತ್ತದೆ. ಈಗಾಗಲೇ ಅಂತಿಮ ವಿಧಿವಿಧಾನ ಕಾರ್ಯಗಳ ಸಿದ್ಧತಾ ಕಾರ್ಯಗಳು ಪೂರ್ಣಗೊಂಡಿದ್ದು, ವೀರಶೈವ ಸಂಪ್ರದಾಯದಂತೆ ಇಂದು ಮಧ್ಯಾಹ್ನ ಸುಮಾರು 3 ಗಂಟೆ ಹೊತ್ತಿಗೆ ಅಂತ್ಯಕ್ರಿಯೆ ನಡೆಸಲಾಗುತ್ತದೆ ಎಂದು ತಿಳಿದುಬಂದಿದೆ.
ಚಾಮರಾಜ ನಗರದಲ್ಲಿ ರಜೆ ವಿಸ್ತರಣೆ
ಇನ್ನು ಇಂದು ಮಹದೇವ ಪ್ರಸಾದ್ ಅವರ ಅಂತ್ಯಕ್ರಿಯೆ ಇರುವುದರಿಂದ ಚಾಮರಾಜನಗರದಲ್ಲಿ ರಜೆ ವಿಸ್ತರಣೆ ಮಾಡಲಾಗಿದೆ. ನಿನ್ನೆ ರಾಜ್ಯಾದ್ಯಂತ ಒಂದು ಸರ್ಕಾರಿ ರಜೆ ಘೋಷಣೆ ಮಾಡಲಾಗಿತ್ತಾತ್ತು. ಮಹದೇವ ಪ್ರಸಾದ್ ಅವರು ಚಾಮರಾಜನಗರ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದು, ಅವರ ಗೌರವಾರ್ಥ ಇಂದೂ ಕೂಡ ಚಾಮರಾಜನಗರದಲ್ಲಿ ರಜೆ ಮುಂದುವರೆಸಲಾಗಿದೆ.
ಜಿಲ್ಲೆಯ ಗಗನಚುಂಬಿ ಜಬಲ್ ರಸ್ತೆಯಲ್ಲಿರುವ ಮಹದೇವ ಪ್ರಸಾದ್ ಅವರ ನಿವಾಸಕ್ಕೆ ಈಗಾಗಲೇ ಪಾರ್ಥೀವ ಶರೀರ ಆಗಮಸಿದ್ದು ಸಾರ್ವಜನಿಕ ದರ್ಶನಕ್ಕೆ ಅನುವು ಮಾಡಿಕೊಡಲಾಗಿದೆ. ಪಾರ್ಥೀವ ಶರೀರ ಆಗಮನದ ವಿಚಾರ ತಿಳಿಯುತ್ತಿದ್ದಂತೆಯೇ ಸಾವಿರಾರು ಮಂದಿ ಅಭಿಮಾನಿಗಳು ಅವರ ಮನೆ ಮುಂದೆ ನೆರೆದಿದ್ದು, ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆಯುತ್ತಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳುವ ಸಲುವಾಗಿ ಚಿಕ್ಕಮಗಳೂರಿಗೆ ಆಗಮಿಸಿದ್ದ ಸಚಿವ ಹೆಚ್ ಎಸ್ ಮಹದೇವ ಪ್ರಸಾದ್ ಅವರು ಮಂಗಳವಾರ ಮುಂಜಾನೆ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ್ದರು.