ಮಹದೇವ್ ಪ್ರಸಾದ್ ಪಾರ್ಥೀವ ಶರೀರ
ಚಾಮರಾಜನಗರ: ಚಿಕ್ಕಮಗಳೂರಿನಲ್ಲಿ ಮಂಗಳವಾರ ಹೃದಯಾಘಾತದಿಂದ ನಿಧನರಾದ ಸಕ್ಕರೆ ಹಾಗೂ ಸಹಕಾರಿ ಸಚಿವ ಎಚ್ ಎಸ್ ಮಹದೇವ್ ಪ್ರಸಾದ್ ಅವರ ಅಂತ್ಯಕ್ರಿಯೆ ಬುಧವಾರ ಸ್ವಗ್ರಾಮ ಗುಂಡ್ಲುಪೇಟೆ ತಾಲೂಕಿನ ಹಾಲಹಳ್ಳಿಯಲ್ಲಿ ನಡೆಯಿತು.
ಇಂದು ಮಧ್ಯಾಹ್ನ ಸಕಲ ಸರ್ಕಾರಿ ಗೌರವದೊಂದಿಗೆ ಹಾಲಹಳ್ಳಿಯಲ್ಲಿರುವ ಫಾರ್ಮ್ ಹೌಸಿನಲ್ಲಿ ಮಹದೇವ್ ಪ್ರಸಾದ್ ಅವರ ಅಂತ್ಯಸಂಸ್ಕಾರ ನಡೆಯಿತು. ಮಹದೇವ್ ಪ್ರಸಾದ್ ಅವರ ಪುತ್ರ ಗಣೇಶ್ ಪ್ರಸಾದ್ ಅವರು ವೀರಶೈವ ಸಂಪ್ರದಾಯದಂತೆ ಧಾರ್ಮಿಕ ವಿಧಿ ವಿಧಾನವನ್ನು ನೆರವೇರಿಸಿದರು.
ಮೊದಲೇ ನಿಶ್ಚಯಿಸಿದಂತೆ ಅವರ ಮಹದೇವ್ ಪ್ರಸಾದ್ ಅವರ ತಂದೆ ತಾಯಿಯ ಸಮಾಧಿ ಪಕ್ಕದಲ್ಲಿಯೇ ಅಂತ್ಯಕ್ರಿಯೆ ನೆರವೇರಿಸಲಾಯಿತು. ಈ ವೇಳೆ ದಿನೇಶ್ ಗುಂಡೂರಾವ್ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು, ಬೆಂಬಲಿಗರು ಹಾಗೂ ಕಾರ್ಯಕರ್ತರು ಅಂತಿಮ ದರ್ಶನ ಪಡೆದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರಾಗಿದ್ದ ಮಹದೇವ್ ಪ್ರಸಾದ್ ಅವರು ನಿನ್ನೆ ಚಿಕ್ಕಮಗಳೂರಿನ ಸೆರಾಯ್ ರೆಸಾರ್ಟ್ ನಲ್ಲಿ ಮಲಗಿದ ಸ್ಥಿತಿಯಲ್ಲೇ ಹೃದಯಾಘಾತದಿಂದ ನಿಧನರಾಗಿದ್ದರು. ನಂತರ ಮಹದೇವ್ ಪ್ರಸಾದ್ ಅವರ ಪಾರ್ಥೀವ ಶರೀರವನ್ನು ಮೈಸೂರಿಗೆ ತರಲಾಗಿತ್ತು.
ಮೈಸೂರಿನ ಕುವೆಂಪು ನಗರದಲ್ಲಿರುವ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಸಚಿವರಾದ ಡಿ.ಕೆ.ಶಿವಕುಮಾರ್ ಕೆ.ಜೆ.ಜಾರ್ಜ್ ಅವರು ಸೇರಿದಂತೆ ಹಲವು ರಾಜಕೀಯ ನಾಯಕರು ಮಹದೇವ್ ಪ್ರಸಾದ್ ಅವರ ಅಂತಿಮ ದರ್ಶನ ಪಡೆದರು.