ರಾಜ್ಯ

ತಮಿಳುನಾಡಿನ 'ಅಮ್ಮಾ' ನೀರಿನಂತೆ ಬಸ್ ಗಳಲ್ಲಿ ಬಾಟಲ್ ನೀರು ಪೂರೈಸಲು ಕೆಎಸ್ ಆರ್ಟಿಸಿ ಯೋಜನೆ

Shilpa D

ಬೆಂಗಳೂರು: ತಮಿಳುನಾಡು ಸಾರಿಗೆ ಇಲಾಖೆ ತನ್ನ ಪ್ರಯಾಣಿಕರಿಗೆ ಬಾಟಲ್ ಗಳಲ್ಲಿ ಅಮ್ಮಾ  ಕುಡಿ ನೀರ್  ಪೂರೈಸುತ್ತಿರುವಂತೆ ಕರ್ನಾಟಕ ರಸ್ತೆ ಸಾರಿಗೆ ನಿಗಮ ಮಿನರಲ್ ವಾಟರ್ ಘಟಕ ಸ್ಥಾಪಿಸಿ ಅದರಿಂದ ಪ್ರಯಾಣಿಕರಿಗೆ ಬಾಟಲ್ ನೀರು ಪೂರೈಸಲು ಚಿಂತಿಸುತ್ತಿದೆ.

ರಾಜ್ಯಾದ್ಯಂತ ದೂರದ ಊರುಗಳಿಗೆ ಸಂಚರಿಸುವ ಕೆಎಸ್ ಆರ್ ಟಿ ಬಸ್ ಗಳಲ್ಲಿ  ತನ್ನದೇ ಆದ ಬ್ರ್ಯಾಂಡ್ ನ ಬಾಟಲ್ ನೀರನ್ನು ಶೀಘ್ರವೇ ಪೂರೈಸಲಾಗುತ್ತದೆ ಎಂದು ಕೆಎಸ್ಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಕಠಾರಿಯಾ ತಿಳಿಸಿದ್ದಾರೆ.

ವಿವಿಧ ಕಂಪನಿಗಳಿಂದ ಪ್ರತಿದಿನ ಸಾರಿಗೆ ಇಲಾಖೆ ಸರಾಸರಿ ನೀರಿನ ಬಾಟಲ್ ಗಳನ್ನು ಖರೀದಿಸುತ್ತಿದೆ. ವಾರ್ಷಿಕವಾಗಿ 1 ಕೋಟಿ ಲೀಟರ್ ನೀರು ಖರೀದಿಸಲು ಇಲಾಖೆ 5 ರಿಂದ 6 ಕೋಟಿ ರು ವೆಚ್ಚ ಮಾಡುತ್ತಿದೆ. ನಮಗೆ ಅಗತ್ಯವಿರುವ ನೀರನ್ನು ನಾವೇ ಪೂರೈಸಿಕೊಂಡರೇ ಹಣ ಉಳಿತಾಯ ಮಾಡಬಹುದಾಗಿದೆ. ನಮ್ಮದೇ ಬ್ರಾಂಡ್ ನಲ್ಲಿ ನೀರಿನ ಬಾಟಲ್ ಗಳನ್ನ ಬಸ್ ಮತ್ತು ಬಸ್ ನಿಲ್ದಾಣಗಳಲ್ಲಿ ಮಾರಾಟ ಮಾಡಲು ಈಗಾಗಲೇ ಎರಡು ಸುತ್ತಿನ ಚರ್ಚೆ ನಡೆಸಿದ್ದೇವೆ ಎಂದು ಅವರು ಹೇಳಿದ್ದಾರೆ.

ಮಿನರಲ್ ವಾಟರ್ ಘಟಕ ಸ್ಥಾಪಿಸಲು ಪ್ರತಿ ಜಿಲ್ಲೆಗಳಲ್ಲೂ ಅಗತ್ಯವಾದ ಭೂಮಿಯನ್ನು ಸಾರಿಗೆ ಇಲಾಖೆ ಹೊಂದಿದೆ. ಖಾಸಗಿ-ಸರ್ಕಾರಿ ಸಹಭಾಗಿತ್ವದಲ್ಲಿ ಕೆಲಸ ಮಾಡಲು ನಾವು ಸಿದ್ದರಿದ್ದೇವೆ ಎಂದು ಹೇಳಿದ್ದಾರೆ.

ಪ್ರತಿ ಲೀಟರ್ ನೀರಿಗೆ ಇನ್ನು ದರ ನಿಗದಿ ಪಡಿಸಿಲ್ಲ, ಲೀಟರ್ ನೀರಿಗೆ 10 ರಿಂದ 15 ರು  ದರ ನಿಗಧಿ ಪಡಿಸಬಹುದು ಎಂದು ಮೂಲಗಳು ತಿಳಿಸಿವೆ, ಅಮ್ಮಾ ನೀರು ಬಸ್ ನಿಲ್ದಾಣ ಹಾಗೂ ಬಸ್ ಗಳಲ್ಲಿ ಪ್ರತಿ ಲೀಟರ್ ಗೆ 10 ರು ನಂತೆ ಮಾರಾಟ ಮಾಡಲಾಗುತ್ತಿದೆ.

ಖಾಸಗಿಯವರ ಸಹಾಯದಿಂದ ಬಸ್ ನಿಲ್ದಾಣಗಳಲ್ಲಿ ನೀರಿನ ವಿತರಣಾ ಯಂತ್ರಗಳನ್ನು ಅಳವಡಿಸಲು ಸಾರಿಗೆ ಇಲಾಖೆ ಚಿಂತಿಸುತ್ತಿದೆ. ಈ ಯಂತ್ರಗಳು ಪ್ರಯಾಣಿಕರಿಗೆ ಶುದ್ದ ಕುಡಿಯುವ ನೀರನ್ನು ಉಚಿತವಾಗಿ ಪೂರೈಸಲಿದೆ ಎಂದು ಕಠಾರಿಯಾ ಹೇಳಿದ್ದಾರೆ.

SCROLL FOR NEXT