ಬೆಂಗಳೂರು: ನಗರದ ಲಾಲ್ ಬಾಗ್ ನಿರ್ಮಾಣ ಹಂತದ ಮೆಟ್ರೊ ನಿಲ್ದಾಣದಲ್ಲಿ ಬಾಂಬ್ ಮಾದರಿಯ ವಸ್ತು ಪತ್ತೆಯಾಗಿದ್ದು, ಕೆಲ ಕಾಲ ಆತಂಕದ ಪರಿಸ್ಥಿತಿ ನಿರ್ಮಾಣವಾಗಿತ್ತು. ತೀವ್ರ ತಾಪಸಣೆಯ ಬಳಿಕ ಇದು ಹುಸಿ ಬಾಂಬ್ ಕರೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ನಿನ್ನೆ ರಾತ್ರಿ 9 ಗಂಟೆಯ ಸುಮಾರಿಗೆ ಅಪರಿಚಿತ ವ್ಯಕ್ತಿಯೊಬ್ಬರು ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ ಬಾಂಬ್ ಮಾದರಿಯ ವಸ್ತು ಇರುವುದಾಗಿ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಬಾಂಬ್ ತಪಾಸಣೆ ಪಡೆ ಹಾಗೂ ಜಯನಗರ ಸಿದ್ದಾಪುರ ಪೊಲೀಸ್ ಠಾಣೆ ಪೋಲಿಸರು ಬಾಂಬ್ ಮಾದರಿಯ ವಸ್ತುವನ್ನು ವಶಕ್ಕೆ ಪಡೆದಿದ್ದಾರೆ.
100ಕ್ಕೆ ಬಂದ ಕರೆ ಪತ್ತೆ ಹಚ್ಚಿದಾಗ ಕಾಯಿನ್ ಬಾಕ್ಸಿನಿಂದ ಮಾಡಿರುವ ಕರೆ ಎಂದು ತಿಳಿದು ಬಂದಿದೆ. ಲಾಲ್ ಬಾಗ್ ನಲ್ಲಿ ಗಣರಾಜ್ಯೋತ್ಸವ ನಿಮಿತ್ತ ಪುಷ್ಪ ಪ್ರದರ್ಶನ ನಡೆಯುತ್ತಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಲು ಯಾರೋ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ ಎಂದು ದಕ್ಷಿಣ ವಲಯ ಡಿಸಿಪಿ ಶರಣಪ್ಪ ಅವರು ತಿಳಿಸಿದ್ದಾರೆ.