ಬೆಂಗಳೂರು: ವಾರಾಂತ್ಯಗಳಲ್ಲಿ ಬೆಂಗಳೂರಿನಿಂದ ನಂದಿ ಬೆಟ್ಟಕ್ಕೆ ನೇರವಾಗಿ ತೆರಳಲು ಅನುಕೂಲವಾಗುವಂತೆ ಬೆಳಗಿನ ಜಾವ ನಾಲ್ಕು ಘಂಟೆಯಿಂದಲೇ ವಿಶೇಷ ಬಸ್ಸುಗಳನ್ನು ಕೆ ಎಸ್ ಆರ್ ಟಿ ಸಿ ಪರಿಚಯಿಸುವ ಸಾಧ್ಯತೆ ಇದೆ.
ಪ್ರವಾಸಿಗರು ಮತ್ತು ಪರಿಸರವಾದಿಗಳು ನಂದಿಬೆಟ್ಟಕ್ಕೆ (ತಪ್ಪಲಿನಿಂದ ತುದಿಗೆ) ಖಾಸಗಿ ಬಸ್ಸುಗಳನ್ನು ನಿಷೇಧಿಸಲು ಒತ್ತಾಯಿಸಿರುವುದರಿಂದ, ಈ ವಿಷಯವಾಗಿ ಕೆ ಎಸ್ ಆರ್ ಟಿ ಸಿ, ಪ್ರವಾಸೋದ್ಯಮ ಇಲಾಖೆ ಮತ್ತು ತೋಟಗಾರಿಕೆ ಇಲಾಖೆಯೊಂದಿಗೆ ಚರ್ಚಿಸಿ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳದೆ ಎಂದು ಕೆ ಎಸ್ ಆರ್ ಟಿ ಸಿ ವ್ಯವಸ್ಥಾಪಕ ನಿರ್ದೇಶಕ ರಾಜೇಂದರ್ ಕುಮಾರ್ ಕಟಾರಿಯಾ ಹೇಳಿದ್ದಾರೆ. ಅವರು ಚಿಕ್ಕಬಳ್ಳಾಪುರ ವಿಭಾಗೀಯ ಅಧಿಕಾರಿ ಮತ್ತು ನಂದಿ ಬೆಟ್ಟದ ವಿಶೇಷ ಅಧಿಕಾರಿ ರಮೇಶ್ ಅವರೊಂದಿಗೆ ಚರ್ಚೆ ಕೂಡ ನಡೆಸಿದ್ದಾರೆ.
"ಇತೀಚಿನ ವರ್ಷಗಳಲ್ಲಿ ನಂದಿ ಬೆಟ್ಟ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಖಾಸಗಿ ವಾಹನಗಳ ಓಡಾಟ ಮಿತಿಮೀರಿದ್ದು, ವಾಯುಮಾಲಿನ್ಯ ಮತ್ತು ಅಪಘಾತಗಳನ್ನು ಹೆಚ್ಚಿಸಿದೆ" ಎಂದು ಕೆ ಎಸ್ ಆರ್ ಟಿ ಸಿ ಪತ್ರಿಕಾ ಹೇಳಿಕೆ ತಿಳಿಸಿದೆ.
ಕಟಾರಿಯಾ ನೇತೃತ್ವದ ಒಂದು ತಂಡ ಮತ್ತು ರೀಬೂಕ್ ರನ್ನರ್ಸ್ ಸ್ಕ್ವಾಡ್ ನ ೩೫ ಸದಸ್ಯರ ತಂಡ ಕೆ ಎಸ್ ಆರ್ ಟಿ ಸಿ ಬಸ್ ನಲ್ಲಿ ನಂದಿ ಬೆಟ್ಟಕ್ಕೆ ತೆರಳಿ, ತಪ್ಪಲಿನಲ್ಲಿ ೧೦ ಕಿ ಮೀ ನಡೆದು, ಪರಿಸರದ ಬಗ್ಗೆ ಕಾಳಜಿ ಮತ್ತು ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಉತ್ತೇಜಿಸಲು ಅಭಿಯಾನ ನಡೆಸಿದ್ದಾರೆ.
ಚಿಕ್ಕಬಳ್ಳಾಪುರ ಮತ್ತು ದೊಡ್ಡಬಳ್ಳಾಪುರದಿಂದ ಕೆ ಎಸ್ ಆರ್ ಟಿ ಸಿ ಬಸ್ಸುಗಳು ದಿನಕ್ಕೆ ೨೦ ಸುತ್ತು ಹೊಡೆಯುತ್ತವೆ ಮತ್ತು ವಾರಾಂತ್ಯದಲ್ಲಿ ಇದು ೩೦ಕ್ಕೆ ಏರುತ್ತದೆ. "ಕೆ ಎಸ್ ಆರ್ ಟಿ ಸಿ ಬಸ್ ದರ ೯ ರೂ ಇದ್ದರೆ ಖಾಸಗಿ ವಾಹನಗಳು ನಂದಿ ಬೆಟ್ಟದಿಂದ ನಂದಿ ಬೆಟ್ಟದ ತಿರುವಿನವರೆಗೆ ೭೦ ರಿಂದ ೧೦೦ ರೂ (ವಿಶೇಷವಾಗಿ ಆಟೋಗಳು) ತೆಗೆದುಕೊಳ್ಳುತ್ತಾರೆ" ಎಂದು ಕೂಡ ಹೇಳಿಕೆ ತಿಳಿಸಿದೆ.