ಬೆಂಗಳೂರು ವಿಶ್ವವಿದ್ಯಾಲಯದ ಈ ವರ್ಷದ ಘಟಿಕೋತ್ಸವದ ಚಿತ್ರ
ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ 52ನೇ ಘಟಿಕೋತ್ಸವದಲ್ಲಿ ಹಲವು ಚಿನ್ನದ ಪದಕ ವಿಜೇತರಿಗೆ ಪದಕ ಸಿಗದೆ ಕೇವಲ ನಗದು ಬಹುಮಾನ ಸಿಕ್ಕಿದ್ದು ನಿರಾಶೆಯನ್ನುಂಟುಮಾಡಿತು.
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ನಿನ್ನೆ ನಡೆದ ಈ ವರ್ಷದ ಘಟಿಕೋತ್ಸವದಲ್ಲಿ 203 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಸಿಕ್ಕಿತ್ತು. ಅವರಲ್ಲಿ ಪದಕ ಸಿಕ್ಕಿದ್ದು ಕೇವಲ 82 ವಿದ್ಯಾರ್ಥಿಗಳಿಗೆ ಮಾತ್ರ. ಇನ್ನುಳಿದ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕೇವಲ ನಗದು ಬಹುಮಾನ ಸಿಕ್ಕಿದ್ದು ನೋಡಿ ಭಾರೀ ನಿರಾಶೆಯಾಯಿತು. ಕೆಲವರು ಅಳುತ್ತಿದ್ದುದೂ ಕಂಡುಬಂತು.
ಎಂ.ಎ ಕನ್ನಡ ಪದವಿ ಸ್ವೀಕರಿಸಿದ ಸೌಜನ್ಯಾ ಒಟ್ಟು 8 ಚಿನ್ನದ ಪದಕಗಳನ್ನು ಗೆದ್ದಿದ್ದರು. ಆದರೆ ಘಟಿಕೋತ್ಸವದಲ್ಲಿ ಅವರಿಗೆ ಸಿಕ್ಕಿದ್ದು ಕೇವಲ ಒಂದು ಪದಕ. ಉಳಿದವಕ್ಕೆ ನನಗೆ ನಗದು ಬಹುಮಾನ ಮತ್ತು ಸರ್ಟಿಫಿಕೇಟ್ ನಲ್ಲಿ ಚಿನ್ನದ ಪದಕ ಎಂದು ಬರೆದು ಕೊಟ್ಟರು.
ವಿಶ್ವವಿದ್ಯಾಲಯದ ಈ ಮನೋಧರ್ಮ ನನಗೆ ನಿಜಕ್ಕೂ ನಿರಾಶೆ ಮೂಡಿಸಿದೆ. ನನ್ನ ಸಾಧನೆಯಿಂದ ನಾನು ಎಂಟು ಚಿನ್ನದ ಪದಕ ಗೆದ್ದುಕೊಂಡಿದ್ದೇನೆ ಎನ್ನುತ್ತಾರೆ.
ಎಂ.ಎಸ್ಸಿ ರಸಾಯನ ಶಾಸ್ತ್ರದಲ್ಲಿ 5 ಚಿನ್ನದ ಪದಕ ಗೆದ್ದುಕೊಂಡ ಕಾಶಿಫಾ ಎಫ್ ಅವರದ್ದೂ ಇದೇ ಕಥೆ. ರಾಜ್ಯಪಾಲರಿಂದ ನಾನು 5 ಚಿನ್ನದ ಪದಕಗಳನ್ನು ಪಡೆಯಲು ಕಾತರದಿಂದ ಕಾಯುತ್ತಿದ್ದೆ. ಆದರೆ ನನಗೆ ಸಿಕ್ಕಿದ್ದು ಕೇವಲ ಒಂದು ಮಾತ್ರ. ಇನ್ನು ಯಾರನ್ನು ಸಂಪರ್ಕಿಸಬೇಕೆಂದು ನನಗೆ ಗೊತ್ತಿಲ್ಲ ಎನ್ನುತ್ತಾರೆ.
ಈ ಬಗ್ಗೆ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ.ಬಿ.ತಿಮ್ಮೇ ಗೌಡ ಅವರನ್ನು ಮಾತನಾಡಿಸಿದಾಗ, ಪ್ರತಿ ಚಿನ್ನದ ಪದಕಕ್ಕೆ 3ರಿಂದ 4,000 ರೂಪಾಯಿ ವೆಚ್ಚವಾಗುತ್ತದೆ. ವಿ.ವಿಯ ಎಲ್ಲಾ ಮೊದಲ ರ್ಯಾಂಕ್ ಪಡೆದವರಿಗೆ ಚಿನ್ನದ ಪದಕ ನೀಡಲಾಗಿದೆ. ಒಬ್ಬೊಬ್ಬರಿಗೆ ಅಷ್ಟು ಚಿನ್ನದ ಪದಕಗಳನ್ನು ನೀಡುವಷ್ಟು ಹಣ ವಿಶ್ವವಿದ್ಯಾಲಯದ ಬಳಿಯಿಲ್ಲ ಎನ್ನುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics