ಬಾರ್ ನವೀಕರಣ, ಸ್ಥಳಾಂತರದಲ್ಲಿ ಭ್ರಷ್ಟಾಚಾರ; ಸಿಎಂ ಸಿದ್ದರಾಮಯ್ಯ ವಿರುದ್ಧ ಎಸಿಬಿಗೆ ದೂರು
ಬಾರ್ ಗಳ ನವೀಕರಣ, ಸ್ಥಳಾಂತರ ವಿಚಾರಕ್ಕೆ ಸಂಬಂಧಿಸಿದಂತೆ ಅಬಕಾರಿ ಇಲಾಖೆಯ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿ ರವಿಕೃಷ್ಣಾರೆಡ್ಡಿ ಸಿಎಂ ಸಿದ್ದರಾಮಯ್ಯ ವಿರುದ್ಧ ಎಸಿಬಿಗೆ ದೂರು ಸಲ್ಲಿಕೆ ಮಾಡಿದ್ದಾರೆ.
ಬೆಂಗಳೂರು: ಸುಪ್ರೀಂ ಕೋರ್ಟ್ ಆದೇಶದ ಬೆನ್ನಲ್ಲೇ ಬಾರ್ ಗಳ ನವೀಕರಣ, ಸ್ಥಳಾಂತರ ವಿಚಾರಕ್ಕೆ ಸಂಬಂಧಿಸಿದಂತೆ ಅಬಕಾರಿ ಇಲಾಖೆಯ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿ ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆ ಅಧ್ಯಕ್ಷ ರವಿಕೃಷ್ಣಾರೆಡ್ಡಿ ಸಿಎಂ ಸಿದ್ದರಾಮಯ್ಯ ವಿರುದ್ಧ ಎಸಿಬಿಗೆ ದೂರು ಸಲ್ಲಿಸಿದ್ದಾರೆ.
ಹೆದ್ದಾರಿಯ 500 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ಬಾರ್ ಗಳು ಇರಬಾರದು ಎಂಬ ಸುಪ್ರೀಂ ಕೋರ್ಟ್ ಆದೇಶವದ ಹೊರತಾಗಿಯೂ ಹೆದ್ದಾರಿಗಳಲ್ಲಿ ಅಕ್ರಮ ಬಾರ್ ಗಳಿದ್ದು, ಇದಲ್ಲದೆ ನಗರದೊಳಗಿರುವ ಬಾರ್ ಗಳಿಗೂ ನವೀಕರಣ, ಸ್ಥಳಾಂತರದ ಭೀತಿ ಶುರುವಾಗಿದೆ. ಇದನ್ನೇ ತಮ್ಮ ಲಂಚಬಾಕತನಕ್ಕೆ ಬಳಸಿಕೊಳ್ಳುತ್ತಿರುವ ಅಬಕಾರಿ ಇಲಾಖೆಯ ಅಧಿಕಾರಿಗಳು ಬಾರ್ ಮಾಲೀಕರಿಂದ ಲಂಚಕ್ಕಾಗಿ ಬೇಡಿಕೆ ಇಡುತ್ತಿದ್ದಾರೆ. ಮದ್ಯದಂಗಡಿಗಳ ಪರವಾನಗಿ ಸ್ಥಳಾಂತರ ಮತ್ತು ನವೀಕರಣ ನೆಪದಲ್ಲಿ ಅಧಿಕಾರಿಗಳು ಲಂಚ ವಸೂಲಿ ಮಾಡುತ್ತಿದ್ದು, ನವೀಕರಣಕ್ಕಾಗಿ ಅರ್ಜಿ ಸಲ್ಲಿಸಿರುವ ಅನೇಕ ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಅದಕ್ಕೆ ಯಾವ ಕಾರಣಗಳನ್ನೂ ಅಧಿಕಾರಿಗಳು ನೀಡುತ್ತಿಲ್ಲ. ಕೇವಲ ಲಂಚ ನೀಡಲಿ ಎಂಬ ಉದ್ದೇಶದಿಂದ ಬಾರ್ ಮಾಲೀಕರಿಗೆ ಅಲೆದಾಡಿಸುತ್ತಿದ್ದಾರೆ ಎಂದು ರವಿಕೃಷ್ಣಾರೆಡ್ಡಿ ದೂರಿನಲ್ಲಿ ಆರೋಪಿಸಿದ್ದಾರೆ.
ಅಂತೆಯೇ ರಾಜ್ಯದಲ್ಲಿ ಒಟ್ಟು 3515 ಬಾರ್ಗಳ ನವೀಕರಣ ರದ್ದುಗೊಳಿಸಲಾಗಿದ್ದು, ನೈಜತೆ ಬಗ್ಗೆ ತಿಳಿಯಲು ತನಿಖೆ ಅಗತ್ಯವಿದೆ ಎಂದೂ ಅವರು ಹೇಳಿದ್ದಾರೆ. ಸಿಎಂ ಸಿದ್ದರಾಮಯ್ಯನವರೇ ಈ ಖಾತೆಯನ್ನು ನಿರ್ವಹಿಸುತ್ತಿದ್ದು, ಜಿಲ್ಲಾಧಿಕಾರಿಗಳು, ಅಬಕಾರಿ ಅಧಿಕಾರಿಗಳ ಬಗ್ಗೆ ಕೂಲಂಕುಷ ತನಿಖೆ ನಡೆಸಬೇಕು. ಹೀಗಾಗಿ ಇಲಾಖೆಯಲ್ಲಿನ ಭ್ರಷ್ಟಾಚಾರಕ್ಕೆ ಸಿಎಂ ಸಿದ್ದರಾಮಯ್ಯ ಅವರೇ ಜವಾಬ್ದಾರಿ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಸುಪ್ರೀಂ ಕೋರ್ಟ್ ಆದೇಶವನ್ನು ಧಿಕ್ಕರಿಸಿ ಹೆದ್ದಾರಿಗಳಲ್ಲಿ ಇನ್ನೂ ಅನೇಕ ಬಾರ್ಗಳು ಕಾರ್ಯ ನಿರ್ವಹಿಸುತ್ತಿವೆ. ವರ್ಗಾವಣೆಗೊಳ್ಳಬೇಕಿರುವ ಬಾರ್ಗಳ ಪೈಕಿ ಕೆಲವು ಸ್ಥಳ ಹುಡುಕುವ ನೆಪದಲ್ಲಿ ಕಾಲವಕಾಶ ಕೇಳಿದ್ದರೆ, ಮತ್ತೆ ಕೆಲವು ಹೊಸ ವಿಳಾಸ ನೀಡಿಯೂ, ಹಳೇ ಪ್ರದೇಶದಲ್ಲೇ ವಹಿವಾಟು ನಡೆಸುತ್ತಿವೆ. ಇನ್ನೂ ಕೆಲವು ಬಾರ್ಗಳು ತಂಬಾಕು ಪದಾರ್ಥಗಳಂತೆ ಸಣ್ಣ ಪುಟ್ಟ ಅಂಗಡಿಗಳ ಮೂಲಕ ಕದ್ದು ಮುಚ್ಚಿ ಮದ್ಯ ಮಾರಾಟದಲ್ಲಿ ತೊಡಗಿವೆ. ಮತ್ತೊಂದೆಡೆ ಡಾಬಾಗಳಲ್ಲಿ ಅಕ್ರಮ ಮದ್ಯ ಮಾರಾಟದ ದೂರುಗಳು ಕೇಳಿ ಬರುತ್ತಿವೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.