ಗದಗ: ಇತ್ತೀಚೆಗಷ್ಟೇ ಕರ್ನಾಟಕದ ಗದಗ ಜಿಲ್ಲೆಯಲ್ಲಿ ಏಲಿಯನ್ ಗಳು ಆಗಮಿಸಿ ಭೀತಿ ಹುಟ್ಟಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಣ್ಯಾಧಿಕಾರಿಗಳು ಸ್ಪಷ್ಟನೆ ನೀಡಿದ್ದು, ಗ್ರಾಮದಲ್ಲಿ ಯಾವುದೇ ರೀತಿಯ ಏಲಿಯನ್ ಗಳಿಲ್ಲ ಎಂದು ಹೇಳಿದ್ದಾರೆ.
ಕಳೆದ ಭಾನುವಾರ ರಾತ್ರಿ ಕರ್ನಾಟಕದ ಗದಗ ಜಿಲ್ಲೆಯ ಸಮೀಪದ ಅಂಟೂರು ಗ್ರಾಮದಲ್ಲಿ ಏಲಿಯನ್ ಗಳು ಆಗಮಿಸಿದ್ದವು ಎಂಬ ಸುದ್ದಿ ಹಾರಿದಾಡುತ್ತಿತ್ತು. ಇದಕ್ಕೆ ಇಂಬು ನೀಡುವಂತೆ ಗ್ರಾಮದ ಸಮೀಪದ ಗದ್ದೆಗಳಲ್ಲಿ ಬೃಹತ್ ಹೆಜ್ಜೆ ಗುರುತುಗಳು ಪತ್ತೆಯಾಗಿದ್ದು, ಈ ಹೆಜ್ಜೆ ಗುರುತುಗಳು ಏಲಿಯನ್ ಗಳದ್ದೇ ಎಂಬ ಮಾತು ಕೂಡ ಕೇಳಿಬರುತ್ತಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಕಳೆದ ರಾತ್ರಿ ಪೂರ್ತಿ ಘಟನಾ ಸ್ಥಳದಲ್ಲಿ ಶೋಧ ನಡೆಸಿದ ಅಧಿಕಾರಿಗಳು ಬೆಳಗ್ಗೆ ಸ್ಪಷ್ಟನೆ ನೀಡಿ ಯಾವುದೇ ರೀತಿಯ ಏಲಿಯನ್ ಗಳು ಪತ್ತೆಯಾಗಿಲ್ಲ ಎಂದು ಹೇಳಿದ್ದಾರೆ.
ಘಟನೆ ನಡೆದ ಸ್ಥಳದಲ್ಲಿ ರಾತ್ರಿ ಇಡೀ ತಾವು ಶೋಧ ನಡೆಸಿದ್ದು, ಈ ವೇಳೆ ಯಾವುದೇ ರೀತಿಯ ಶಂಕಾಸ್ಪದ ಪ್ರಾಣಿಯಾಗಲಿ ಅನುಮಾನಾಸ್ಪದ ಶಬ್ದಗಳಾಗಲಿ ಕೇಳಿ ಬಂದಿಲ್ಲ ಎಂದು ಹೇಳಿದ್ದಾರೆ.
ಆದರೆ ಅರಣ್ಯಾಧಿಕಾರಿಗಳ ಸ್ಪಷ್ಟನೆ ಬಳಿಕವೂ ಗ್ರಾಮದಲ್ಲಿ ಭಯದ ವಾತಾವರಣವಿದ್ದು, ಅಧಿಕಾರಿಗಳ ಮಾತನ್ನು ಗ್ರಾಮಸ್ಥರು ನಂಬುತ್ತಿಲ್ಲ ಎನ್ನಲಾಗಿದೆ. ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಜಯ ಪ್ರಕಾಶ್ ನಾಗರೆಡ್ಡಿ ಎಂಬುವವರು, ಸಮೀಪದ ಹೊಲಗಳಲ್ಲಿ ಬೃಹತ್ ಹೆಜ್ಜೆ ಗುರುತುಗಳ ಪತ್ತೆಯಾಗಿವೆ. ಇದು ಕಿಡಿಗೇಡಿ ಕೃತ್ಯವೇ ಎಂದು ಹೇಳುವುದಾದರೆ, ಅಷ್ಟು ಬೃಹತ್ ಹೆಜ್ಜೆ ಗುರುತುಗಳನ್ನು ಸೃಷ್ಟಿಸಲು ಸಾಧ್ಯವೇ ಇಲ್ಲ,. ಅದೂ ಕೂಡ ಸುಮಾರು 2 ಕಿ.ಮೀ ದೂರದವರೆಗೂ ಹೆಜ್ಜೆ ಗುರುತುಗಳು ಪತ್ತೆಯಾಗಿವೆ.
ನಾವೇ ಬೇಕೆಂದು ಹಣ ನೀಡಿ ಕೂಲಿಯವರಿಂದ ಈ ಹೆಜ್ಜೆ ಗುರುತುಗಳನ್ನು ಹಾಕಿಸಿದರೂ ಅಷ್ಟು ನಿಖರವಾಗಿ ಒಂದೇ ರಾತ್ರಿಯಲ್ಲಿ ಅಷ್ಟು ದೂರದವರೆಗೆ ಹೆಜ್ಜೆ ಗುರುತು ಸೃಷ್ಟಿಸಲು ಅಸಾಧ್ಯ ಎಂದು ಭೀತಿ ವ್ಯಕ್ತಪಡಿಸಿದ್ದಾರೆ.