ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶ ವಿಗ್ರಹಗಳು
ಬೆಂಗಳೂರು: ಪರಿಸರ ಸ್ನೇಹಿ ಗಣೇಶ ಹಬ್ಬವನ್ನು ಪ್ರಚಾರ ಮಾಡುವ ಉದ್ದೇಶದಿಂದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ(ಕೆಎಸ್ ಪಿಸಿಬಿ) ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಆದೇಶ ನೀಡಿ ಪ್ಯಾಸ್ಟರ್ ಆಫ್ ಪ್ಯಾರಿಸ್(ಪಿಒಪಿ) ಗಣೇಶ ವಿಗ್ರಹಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಜನರಿಗೆ ಸೂಚನೆ ನೀಡಬೇಕೆಂದು ಹೇಳಿದೆ. ಗಣೇಶ ಹಬ್ಬವನ್ನು ದೇಶಾದ್ಯಂತ ಆಗಸ್ಟ್ 25ರಂದು ಆಚರಿಸಲಾಗುತ್ತಿದೆ.
ಆದರೆ ಗಣೇಶ ವಿಗ್ರಹ ತಯಾರಕರು ಸಂಕಷ್ಟಕ್ಕೀಡಾಗುತ್ತಾರೆ. ಇವರು ಈಗಾಗಲೇ ಪ್ಲಾಸ್ಟರ್ ಆಫ್ ಪ್ಯಾರಿಸ್ ನ ಗಣೇಶ ಮೂರ್ತಿಗಳನ್ನು ತಯಾರಿಸಲು ಆರಂಭಿಸಿದ್ದಾರೆ. ಈ ವರ್ಷ ಗಣೇಶ ಮೂರ್ತಿ ತಯಾರಕರು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ವಿರುದ್ಧ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಿದ್ದಾರೆ.
ನಮ್ಮ ನಿಷೇಧ ನೊಟೀಸನ್ನು ಎತ್ತಿಹಿಡಿದ ನ್ಯಾಯಾಲಯ ಆದೇಶದ ಜಾರಿಗೆ ಸೂಚಿಸಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಹೇಳುತ್ತಾರೆ. ಇದರ ಆಧಾರದ ಮೇಲೆ ಕೆಎಸ್ ಪಿಸಿಬಿ ಎಲ್ಲಾ ಜಿಲ್ಲಾಧಿಕಾರಿಗಳು ಮತ್ತು ಗ್ರಾಮ ಪಂಚಾಯ್ತಿ ಮುಖ್ಯಸ್ಥರಿಗೆ ಸುತ್ತೋಲೆ ಕಳುಹಿಸಿದೆ. ಹೊಸ ಸುತ್ತೋಲೆ ಸದ್ಯದಲ್ಲಿಯೇ ಹೊರಡಿಸಲಾಗುತ್ತಿದೆ.
ಬೇರೆ ರಾಜ್ಯಗಳಿಂದ ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶ ಮೂರ್ತಿಗಳನ್ನು ತಾರದಿರುವ ಬಗ್ಗೆ ಖಚಿತಪಡಿಸಲು ಚೆಕ್ ಪಾಯಿಂಟ್ ಗಳಲ್ಲಿ ತಪಾಸಣೆಗಳನ್ನು ಹೆಚ್ಚಿಸಲು ಎಲ್ಲಾ ಜಿಲ್ಲಾಧಿಕಾರಿಗಳಿಗೆ ಮಾಲಿನ್ಯ ನಿಯಂತ್ರಣ ಮಂಡಳಿ ಸೂಚನೆ ನೀಡಿದೆ. ಮುಂಬೈ, ಗುಜರಾತ್ ಮೊದಲಾದ ಕಡೆಗಳಿಂದ ಪ್ಲಾಸ್ಟರ್ ಆಫ್ ಪ್ಯಾರಿಸ್ ಮೂರ್ತಿಗಳನ್ನು ತರಿಸಲಾಗುತ್ತಿವೆ ಎಂದು ನಮಗೆ ದೂರುಗಳು ಬರುತ್ತವೆ. ಈ ಬಾರಿ ನಾವು ಪೊಲೀಸರ ಸಹಾಯದಿಂದ ಇವುಗಳು ರಾಜ್ಯದೊಳಗೆ ಬಾರದಂತೆ ನೋಡಿಕೊಳ್ಳುತ್ತೇವೆ ಎಂದು ಅಧಿಕಾರಿಗಳು ಹೇಳುತ್ತಾರೆ.
ಕಳೆದ ವರ್ಷ ಬಿಬಿಎಂಪಿ ಗಣೇಶ ಮೂರ್ತಿಗಳನ್ನು ವಿಸರ್ಜಿಸಲು 35 ಟ್ಯಾಂಕುಗಳ ವ್ಯವಸ್ಥೆ ಮಾಡಿತ್ತು. 185 ಮೊಬೈಲ್ ಟ್ಯಾಂಕುಗಳನ್ನು ಕೂಡ ಬಳಸಲಾಗಿತ್ತು. ಈ ವರ್ಷ ಮೊಬೈಲ್ ಟ್ಯಾಂಕುಗಳನ್ನು ಹೆಚ್ಚಿಸುವುದಲ್ಲದೆ ಪ್ಲಾಸ್ಟರ್ ಆಫ್ ಪ್ಯಾರಿಸ್ ಮೂರ್ತಿಗಳನ್ನು ವಿಸರ್ಜಿಸಲು ಬಿಡುವುದಿಲ್ಲ ಎಂದು ಅಧಿಕಾರಿಯೊಬ್ಬರು ಹೇಳುತ್ತಾರೆ.
ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಜೊತೆ ಮಾತನಾಡಿದ ಕೆಎಸ್ ಪಿಸಿಬಿ ಅಧ್ಯಕ್ಷ ಲಕ್ಷ್ಮಣ್, ಕಳೆದ ವರ್ಷವೇ ಶೇಕಡಾ 50ರಷ್ಟು ನಿಷೇಧ ಮಾಡಬಹುದಾಗಿತ್ತು. ಈ ವರ್ಷ ನಮಗೆ ಹೈಕೋರ್ಟ್ ನ ಆದೇಶ ಕೂಡ ಇದೆ. ಹಾಗಾಗಿ ಶೇಕಡಾ 100ರಷ್ಟು ಸಾಧಿಸಬಹುದೆಂಬ ವಿಶ್ವಾಸವಿದೆ. ಪ್ಲಾಸ್ಟರ್ ಆಫ್ ಪ್ಯಾರಿಸ್ ನ ಹಳೆಯ ಸಂಗ್ರಹವನ್ನು ಮಾರಾಟ ಮಾಡಲು ಅವಕಾಶ ನೀಡಬೇಕೆಂದು ನಮಗೆ ಮಾರಾಟಗಾರರ ಮನವಿಗಳು ಬಂದಿವೆ. ಆದರೆ ನಾವು ಅವುಗಳನ್ನು ಮಾರಾಟ ಮಾಡಲು ಬಿಡುವುದಿಲ್ಲ. ಪರಿಸರ ಸ್ನೇಹಿ ಗಣೇಶನ ಮೂರ್ತಿ ಬಳಕೆಗೆ ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು.
ಹಲವು ವರ್ಷಗಳಿಂದ ಮೂರ್ತಿ ತಯಾರಿಸಿಕೊಂಡು ಬಂದಿರುವ ಶ್ರೀರಾಮ(ಹೆಸರು ಬದಲಿಸಲಾಗಿದೆ), ಕಳೆದ ವರ್ಷ ಮಾಡಿದ ಪ್ಲಾಸ್ಟರ್ ಆಫ್ ಪ್ಯಾರಿಸ್ ಇನ್ನೂ ಇದೆ ನಾವು ಕೋರ್ಟ್ ನ ಆದೇಶಕ್ಕೆ ತಲೆಬಾಗಿ ಮಣ್ಣಿನ ಮೂರ್ತಿಗಳನ್ನು ತಯಾರಿಸುತ್ತಿದ್ದೇವೆ. ಆದರೆ ನಾವು ಕಳೆದ ವರ್ಷ ಹಾಕಿದ ಬಂಡವಾಳಕ್ಕೆ ಏನು ಗತಿ? ಎಂದು ಕೇಳುತ್ತಾರೆ. ಮಣ್ಣಿನಲ್ಲಿ ದೊಡ್ಡ ಮೂರ್ತಿಗಳನ್ನು ಮಾಡುವುದು ಕಷ್ಟ. ಅನೇಕ ಸಂಘ-ಸಂಸ್ಥೆಗಳು ದೊಡ್ಡ ದೊಡ್ಡ ಮೂರ್ತಿಗಳನ್ನು ಕೇಳುತ್ತಾರೆ ಎನ್ನುತ್ತಾರೆ.
ಪರಿಸರ ತಜ್ಞ ಎ.ಎನ್.ಯೆಲ್ಲಪ್ಪ ರೆಡ್ಡಿ, ಕೆರೆಗಳ ಹತ್ತಿರ ಮೂರ್ತಿಗಳನ್ನು ವಿಸರ್ಜಿಸಲು ಬಿಬಿಎಂಪಿ ಅವಕಾಶ ಕಲ್ಪಿಸಿದೆ. ಆದರೆ ಇದರಿಂದ ಜಲವಾಸಿಗಳಿಗೆ ತೊಂದರೆಯಾಗುತ್ತದೆ ಎನ್ನುತ್ತಾರೆ.
ಕೆಲವು ಧಾರ್ಮಿಕ ಮುಖಂಡರಿಂದ ಕೂಡ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತ ಸ್ಥಳೀಯ ನಗರ ಸಂಸ್ಥೆಗಳಿಗೆ ವಿರೋಧ ವ್ಯಕ್ತವಾಗಿದೆ.
ಹಸಿರು ಗಣೇಶ: ಮಣ್ಣಿನ ಗಣೇಶ ವಿಗ್ರಹಗಳನ್ನು ಮಾಡುವುದು ಹೇಗೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಉಚಿತ ಕಾರ್ಯಾಗಾರವನ್ನು ಸಾರ್ವಜನಿಕರಿಗೆ ನೀಡಲಿದೆ. ಯಾರಾದರೂ ನಿವಾಸಿಗಳು ಪ್ಲಾಸ್ಟರ್ ಆಫ್ ಪ್ಯಾರಿಸ್ ಗಣೇಶ ವಿಗ್ರಹಗಳನ್ನು ತಯಾರಿಸುತ್ತಿರುವುದು ಅಥವಾ ಮಾರಾಟ ಮಾಡುತ್ತಿರುವುದು ಕಂಡುಬಂದರೆ 080-25588151ಗೆ ಕರೆ ಮಾಡಬಹುದು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos