ಕಾರಾಗೃಹ ಇಲಾಖೆ ಡಿಐಜಿ ಡಿ. ರೂಪಾ
ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಡೆಯುತ್ತಿರುವ ಅವ್ಯವಹಾರಗಳ ಬಗ್ಗೆ ಡಿಐಜಿ ರೂಪಾ ವರದಿ ಸಲ್ಲಿಸಿದ್ದಾರೆ, ಇದರಿಂದ ಸಾರ್ವಜನಿಕ ವಲಯದಲ್ಲಿ ಅವರ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ ವರದಿಯೇ ಆಕೆಗೆ ತಿರುಗುಬಾಣವಾಗಬಹುದು ಎಂದು ನಿವೃತ್ತ ಹಿರಿಯ ಐಪಿಎಸ್ ಅಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ.
ಕಾರಾಗೃಹ ಇಲಾಖೆಯಲ್ಲಿನ ಆಘಾತಕಾರಿ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಿಯಿಸಿರುವ ಇಬ್ಬರು ನಿವೃತ್ತ ಪೊಲೀಸ್ ಅಧಿಕಾರಿಗಳು, ವರದಿ ಸಲ್ಲಿಸಿರುವುದು ದೊಡ್ಡ ವಿಷಯವಲ್ಲ, ಡಿಐಜಿ ರ್ಯಾಂಕ್ ಅಧಿಕಾರಿಯಾಗಿ ನಡೆಯುತ್ತಿರುವ ಅಕ್ರಮಗಳಿಗೆ ಕಡಿವಾಣ ಹಾಕಬೇಕಿದೆ. ತಪ್ಪು ಮಾಡಲು ನೆರವು ನೀಡುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಶಿಫಾರಸು ಮಾಡಬೇಕಿದೆ ಎಂದು ಹೇಳಿದ್ದಾರೆ.
ಶಶಿಕಲಾ ಅಡುಗೆ ಕೋಣೆಯಲ್ಲಿ ಹಾಗೂ ಇತರ ಕೈದಿಗಳ ಕೊಠಡಿಯಿಂದ ವಸ್ತುಗಳನ್ನು ಸೀಜ್ ಮಾಡಿರುವುದು ರೂಪಾ ಕರ್ತವ್ಯವಾಗಿದೆ. ಇಲಾಖೆಯಲ್ಲಿ ನಡೆಯುತ್ತಿರುವ ತಪ್ಪುಗಳಿಗೆ ಅವರು ಸಮಾನ ಹೊಣೆಗಾರರಾಗಿರುತ್ತಾರೆ. ಆದರೆ ಹಿರಿಯ ಅಧಿಕಾರಿಗಳ ವಿರುದ್ಧ ಯಾವುದೇ ಸಾಕ್ಷಿ ಆಧಾರವಿಲ್ಲದೇ ಲಂಚ ಆರೋಪ ಮಾಡಿರುವುದು ರೂಪಾಗೆ ಹಿನ್ನಡೆಯಾಗುವ ಸಾಧ್ಯತೆಯಿದೆ ಎಂದು ಹೆಸರು ಹೇಳಲು ಇಚ್ಚಿಸದ ಹಿರಿಯ ನಿವೃತ್ತ ಅಧಿಕಾರಿ ಅಭಿಪ್ರಾಯ ಪಟ್ಟಿದ್ದಾರೆ.
ನಾನು ಕಾರಾಗೃಹ ಇಲಾಖೆ ಅಧಿಕಾರಿಯಾಗಿದ್ದಾಗ ಆಗಾಗ್ಗೆ ಸರ್ ಪ್ರೈಸ್ ವಿಸಿಟ್ ನೀಡುತ್ತಿದ್ದೆ. ಜೈಲಿನಲ್ಲಿ ನಡೆಯುತ್ತಿದ್ದ ಅವ್ಯವಹಾರಗಳ ಬಗ್ಗೆ ಹಾಗೂ ಜೈಲು ಸೂಪರಿಂಡೆಂಟ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ವರದಿ ಸಲ್ಲಿಸಿದ್ದೆ, ಜೈಲಿನಲ್ಲಿ ತರಕಾರಿಯನ್ನು ಮತ್ತೊಬ್ಬ ಕೈದಿಗೆ ಮಾರಾಟ ಮಾಡುತ್ತಿದ್ದುದ್ದ ಬಗ್ಗೆ ವಿವರವಾದ ವರದಿ ನೀಡಿದ್ದೆ. ಆದರೆ ಜೈಲು ಅಧಿಕಾರಿ ಇವುಗಳನ್ನು ತಡೆಯಲು ವಿಫಲರಾದರು. ಯಾರೋಬ್ಬರನ್ನು ಅಮಾನತುಗೊಳಿಸಲಿಲ್ಲ ಅಥವಾ ಕರ್ತವ್ಯದಿಂದ ವಜಾಗೊಳಿಸಲಿಲ್ಲ, ಆದರೆ ನಂತರ, ಆ ಅಧಿಕಾರಿ ವಯಕ್ತಿಕ ಕಾರಣದಳಿಂದಾಗಿ ಆತ್ಮಹತ್ಯೆಗೆ ಶರಣಾದರು ಎಂದು ಅಧಿಕಾರಿ ತಿಳಿಸಿದ್ದಾರೆ.
ಕಾರಾಗೃಹ ಇಲಾಖೆಯಲ್ಲಿ ಭಾರೀ ಪ್ರಮಾಣದ ಸುಧಾರಣೆಯಾಗಬೇಕಿದೆ. ಅದರಲ್ಲೂ ಪ್ರಮುಖವಾಗಿ ಹೆಚ್ಚುವರಿ ಸಿಬ್ಬಂದಿ ನೇಮಕವಾಗಬೇಕಿದೆ. ಕಂಪ್ಯೂಟರೀಕರಣ ಮತ್ತು ಆಧುನೀಕರಣ ಮಾಡುವುದರಿಂದ ಅವ್ಯವಹಾರಗಳನ್ನು ತಡೆಯಲು ಸಾಧ್ಯವಿದೆ, ಕೈದಿಗಳ ಜೀವನ ಮಟ್ಟ ಕೂಡ ಸುಧಾರಿಸಬೇಕಿದೆ ಎಂದು ನಿವೃತ್ತ ಡಿಜಿ ಎಲ್. ರೇವಣ್ಣ ಸಿದ್ದಯ್ಯ ಹೇಳಿದ್ದಾರೆ.
ಜೈಲು ಆಡಳಿತದಲ್ಲಿರುವ ದೋಷಗಳನ್ನು ಹೈಲೈಟ್ ಮಾಡುವ ಗಂಭೀರ ಪ್ರಯತ್ನದ ಬಗ್ಗೆ ಪ್ರಶಂಸೆ ವ್ಯಕ್ತ ಪಡಿಸಿರುವ ಅವರು, ಡಿಐಜಿ ರೂಪಾ ವ್ಯವಸ್ಥಿತ ಮಾರ್ಗದಲ್ಲಿ ಹೋಗಬೇಕಿತ್ತು,. ಇಲಾಖೆಯಲ್ಲಿ ಶಿಸ್ತು ಪರಿಪಾಲನೆ ಮುಖ್ಯವಾಗಿದೆ, ಇಂಥಹ ಗಂಭೀರ ಆರೋಪಗಳು ಜೈಲಿನಲ್ಲಿ ಸಹಜ ಜೀವನ ನಡೆಸುತ್ತಿರುವ ಇತರ ಕೈದಿಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ ಎಂದು ಹೇಳಿದ್ದಾರೆ.
ಸಹೋದ್ಯೋಗಿಗಳನ್ನು, ಹಿರಿಯ ಅಧಿಕಾರಿಗಳನ್ನು ಸಾರ್ವಜನಿಕವಾಗಿ ನಿಂದಿಸಿ, ಎಳೆದು ತರುವುದಕ್ಕಿಂತ ಆರೋಗ್ಯಕರವಾದ ರೀತಿಯಲ್ಲಿ ಸರಿಪಡಿಸಿಕೊಂಡು ಕೆಲಸ ಮಾಡುವುದು ಒಳ್ಳೆಯದು ಎಂದು ಅವರು ಸಲಹೆ ನೀಡಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos