ಬೆಂಗಳೂರು ವಿಶ್ವವಿದ್ಯಾಲಯ (ಸಂಗ್ರಹ ಚಿತ್ರ)
ಬೆಂಗಳೂರು: ಶಾಲಾ ಮತ್ತು ಕಾಲೇಜುಗಳ ಆವರಣದಲ್ಲಿ ಉಂಟಾಗುತ್ತಿರುವ ಘರ್ಷಣೆಗಳನ್ನು ಹತ್ತಿಕ್ಕಲು ಪ್ರಾಥಮಿಕ ಮತ್ತು ಫ್ರೌಢ ಶಿಕ್ಷಣ ಇಲಾಖೆ ಮುಂದಾಗಿದ್ದು, ಶಾಲಾ, ಕಾಲೇಜುಗಳ ಆವರಣವನ್ನು ಸೂಕ್ಷ್ಮವಲಯಗಳೆಂದು ಘೋಷಣೆ ಮಾಡಲು ಚಿಂತನೆ ನಡೆಸಿದೆ.
ನಿನ್ನೆಯಷ್ಟೇ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರು, ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಯಾವುದೇ ಸಂಘಟನೆಗಳೊಂದಿಗೆ ಗುರ್ತಿಸಿಕೊಳ್ಳದಂತೆ ಹಾಗೂ ಶಾಲಾ, ಕಾಲೇಜುಗಳ ಆವರಣವನ್ನು ಸೂಕ್ಷ್ಮ ವಲಯಗಳೆಂದು ಘೋಷಿಸಲು ಸುತ್ತೋಲೆ ಹೊರಡಿಸಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.
ವಿದ್ಯಾರ್ಥಿಗಳ ಪೋಷಕರೆಂದು ಶಾಲಾ-ಕಾಲೇಜುಗಳ ಆವರಣಕ್ಕೆ ಬರುವ ಅನಧಿಕೃತ ವ್ಯಕ್ತಿಗಳು, ನಂತರ ಕಾಲೇಜುಗಳ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಲು ಯತ್ನಿಸುತ್ತಿದ್ದಾರೆ. ಹೀಗಾಗಿ ಶಾಲಾ-ಕಾಲೇಜುಗಳ ಆವರಣವನ್ನು ಸೂಕ್ಷ್ಮವಲಯವೆಂದು ಘೋಷಣೆ ಮಾಡಿ, ವಿದ್ಯಾರ್ಥಿಗಳನ್ನು ಭೇಟಿ ಮಾಡಲು ಬರುವ ಪೋಷಕರು ಕೂಡ ಅನುಮತಿ ಪಡೆದುಕೊಂಡು ಬರುವಂತೆ ಸುತ್ತೋಲೆ ಹೊರಡಿಸಲು ನಿರ್ಧರಿಸಲಾಗಿದೆ. ಮಕ್ಕಳನ್ನು ಭೇಟಿಯಾಗಲು ಬರುವ ಪೋಷಕರಿಗೆ ಭೇಟಿಗೆಂದೇ ಸಮಯವನ್ನು ನಿಗದಿ ಮಾಡಲಾಗುತ್ತದೆ. ಮಕ್ಕಳು, ಶಿಕ್ಷಕರು, ಪ್ರಾಂಶುಪಾಲರು ಹಾಗೂ ಆಡಳಿತ ಮಂಡಳಿಗಳ ಸಿಬ್ಬಂದಿಗಳನ್ನು ಭೇಟಿಯಾಗಲು ಬರುವ ವ್ಯಕ್ತಿಗಳು ನಿಗದಿತ ಸಮಯದಲ್ಲಿಯೇ ಬಂದು ಭೇಟಿ ಮಾಡಲು ಸುತ್ತೋಲೆ ಹೊರಡಿಸಲಾಗುತ್ತದೆ.
ರಾಜ್ಯದಲ್ಲಿ ಎಲ್ಲಾ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳನ್ನು ವಿವಿಧ ಸಂಘಟನೆಗಳು ಬಳಸಿಕೊಳ್ಳುತ್ತಿದೆ. ಅನೇಕ ಕಡೆ ರಾಜಕೀಯ ಚಟುವಟಿಕೆಗಳಿಗೂ ಬಳಕೆಯಾಗುತ್ತಿದ್ದಾರೆ. ಇದನ್ನು ತಪ್ಪಿಸಲು ಸರ್ಕಾರ ಈ ರೀತಿಯ ಚಿಂತನೆ ನಡೆಸಿದೆ. ವಿದ್ಯಾರ್ಥಿಗಳು ಸಂಘಟನೆಗಳಿಗೆ ಬಳಕೆಯಾಗುವುದು ಮತ್ತು ರಾಜಕೀಯವಾಗಿ ಬಳಕೆಯಾಗುವ ಬಗ್ಗೆ ಪೋಷಕರಿಂದಲೇ ದೂರುಗಳು ಬಂದಿವೆ. ಅದನ್ನು ತಡೆಯುವುದಕ್ಕೂ ಪೋಷಕರಿಂದ ಸಲಹೆಗಳು ಬಂದಿವೆ. ಹೀಗಾಗಿ ಶೀಘ್ರದಲ್ಲಿಯೇ ಸುತ್ತೋಲೆ ಹೊರಡಿಸಲು ಮುಂದಾಗಿದ್ದೇವೆ.
ವಿದ್ಯಾರ್ಥಿಗಳಿಗೆ ಯಾವುದೋ ಒಂದು ಸಂಘಟನೆಗೆ ಸಂಬಂಧಿಸಿದಂತೆ ನಿರ್ಬಂಧಿಸುವುದಿಲ್ಲ. ಬದಲಾಗಿದೆ ಎಲ್ಲಾ ಸಂಘಟನೆಗಳಿಗೂ ಅನ್ವಯವಾಗುವಂತೆ ತಡೆಯುತ್ತೇನೆ. ಆ ಮೂಲಕ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಯಾವುದೇ ರಾಜಕೀಯ ಚಟುವಟಿಕೆಗಳಲ್ಲಿ ಭಾಗವಹಿಸದಂತೆ ಮಾಡಲಾಗುತ್ತದೆ ಈ ಸಂಬಧ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಿದ್ದೇನೆ.
ಕೆಲ ಸ್ಥಳೀಯ ನಾಯಕರು, ಕಾರ್ಯಕರ್ತರು ಹಾಗೂ ಸಂಘಟನೆಗಳು ಪ್ರತಿಭಟನೆಯ ಹೆಸರಿನಲ್ಲಿ ಶಾಲಾ-ಕಾಲೇಜುಗಳ ಆವರಣ ಪ್ರವೇಶ ಮಾಡುತ್ತಿವೆ. ಇದರಿಂದ ಕಾಲೇಜುಗಳ ಆವರಣದಲ್ಲಿ ಭದ್ರತಾ ಲೋಪಗಳು ಕಂಡು ಬರುತ್ತಿವೆ. ಇದಲ್ಲದೆ, ಕೆಲ ಕಾರ್ಯಕರ್ತರು ಹಾಗೂ ಸಂಘಟನೆಗಳು ಹಣ ನೀಡುವಂತೆ ಶಾಲಾ ಆಡಳಿತ ಮಂಡಳಿಗಳಿಗೆ ಬೆದರಿಕೆಗಳನ್ನು ಹಾಕುತ್ತಿರುವುದೂ ಕೂಡ ನಮ್ಮ ಗಮನಕ್ಕೆ ಬಂದಿದೆ. ಇಂತಹ ಪರಿಸ್ಥಿತಿ ಹಾಗೂ ಸಮಸ್ಯೆಗಳು ಎದುರಾದಾಗ ಸಂಬಂಧ ಪಟ್ಟಂತಹ ಶಾಲಾ ಮಂಡಳಿಗಳು ಇಲಾಖೆಗೆ ಅಥವಾ ಪೊಲೀಸರಿಗೆ ದೂರು ನೀಡಬೇಕಿದೆ ಎಂದು ಸೇಠ್ ತಿಳಿಸಿದ್ದಾರೆ.