ರಾಜ್ಯ

ಕ್ಯಾಂಪಸ್ ನೈರ್ಮಲ್ಯ ಕಾಪಾಡಿದರೆ ವಿಶ್ವವಿದ್ಯಾಲಯಗಳಿಗೆ ರ್ಯಾಂಕ್

Sumana Upadhyaya
ಬೆಂಗಳೂರು: ಕ್ಯಾಂಪಸ್ ಗಳಲ್ಲಿ ಸ್ವಚ್ಛತೆ ಕಾಪಾಡುವ ಉನ್ನತ ಶಿಕ್ಷಣ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳಿಗೆ ಸ್ವಚ್ಛ ರ್ಯಾಂಕಿಂಗ್ ನೀಡಲಾಗುತ್ತದೆ. ಯೂನಿವರ್ಸಿಟಿ ಗ್ರಾಂಟ್ಸ್ ಕಮಿಷನ್(ಯುಜಿಸಿ) ಇದಕ್ಕೆ ಸಂಬಂಧಪಟ್ಟಂತೆ ದೇಶಾದ್ಯಂತ ಎಲ್ಲಾ ವಿಶ್ವವಿದ್ಯಾಲಯಗಳಿಗೆ ಸೂಚನೆ ಕಳುಹಿಸಿದೆ.
ಸ್ವಚ್ಛ ಪ್ರಶಸ್ತಿಗೆ ಆಯ್ಕೆಯಾದ ವಿಶ್ವವಿದ್ಯಾಲಯಗಳನ್ನು ಸೆಪ್ಟೆಂಬರ್ 8ರಂದು ದೆಹಲಿಯಲ್ಲಿ ನಡೆಯುವ ರಾಷ್ಟ್ರೀಯ ಸ್ವಚ್ಛ ಸಮ್ಮೇಳನಕ್ಕೆ ಕರೆದು ಸನ್ಮಾನಿಸಲಾಗುತ್ತದೆ. ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯ ರ್ಯಾಂಕಿಂಗ್ ಸಂಸ್ಥೆಯ ಹೆಸರನ್ನು ಘೋಷಿಸುತ್ತದೆ.
ಆಸಕ್ತ ವಿಶ್ವವಿದ್ಯಾಲಯಗಳು ತಮ್ಮ ಅರ್ಜಿಗಳನ್ನು ಈ ತಿಂಗಳ 31ರೊಳಗೆ www.mhrd.gov.inನಲ್ಲಿ ಲಾಗಿನ್ ಆಗಿ ಅರ್ಜಿ ಸಲ್ಲಿಸಬಹುದು ಎಂದು ಬೆಂಗಳೂರು ವಿಶ್ವವಿದ್ಯಾಲಯದ ಪ್ರಭಾರ ಉಪ ಕುಲಪತಿ ಪ್ರೊ.ಮುನಿರಾಜು ತಿಳಿಸಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯ ಪ್ರಶಸ್ತಿಗೆ ಅರ್ಜಿ ಹಾಕಲಿದೆ ಎಂದು ಹೇಳಿದರು.
ಅರ್ಹತೆಗಳೇನು?: ಹಾಸ್ಟೆಲ್ ಗಳಲ್ಲಿ ಶೌಚಾಲಯ ಸೌಲಭ್ಯ,  ಶೌಚಾಲಯಗಳ ಸ್ವಚ್ಛತೆ, ನಿರ್ವಹಣೆ, ನೀರಿನ ಸೌಲಭ್ಯ, ಶಿಕ್ಷಣ ಸಂಸ್ಥೆಯ ಕಟ್ಟಡಗಳು, ಕ್ಯಾಂಪಸ್ ಗಳಲ್ಲಿ ಕಸ-ಕಡ್ಡಿಗಳು ಮತ್ತು ಕೊಳಕು ಪದಾರ್ಥಗಳ ನಿರ್ವಹಣೆ, ಕಸ ವಿಲೇವಾರಿ ವ್ಯವಸ್ಥೆ, ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆಗಾಗಿ ನವೀನ ತಂತ್ರಜ್ಞಾನವನ್ನು ಬಳಕೆ, ಹಾಸ್ಟೆಲ್ ಅಡುಗೆ ಮನೆಯ ಸ್ವಚ್ಛತೆ, ಸಿಬ್ಬಂದಿ ಉಡುಪು, ಆಹಾರ ತಯಾರಿಕೆಯ ತಂತ್ರಜ್ಞಾನ, ನೀರಿನ ಸಂಗ್ರಹಣೆ, ಪೈಪ್ ಲೈನ್ ವ್ಯವಸ್ಥೆಗಳು ಮತ್ತು ಕುಡಿಯುವ ನೀರಿನ ಗುಣಮಟ್ಟ, ಕ್ಯಾಂಪಸ್ ನಲ್ಲಿ ಹಸಿರು ಉದ್ಯಾನ ಇತ್ಯಾದಿಗಳನ್ನು ಪರಿಶೀಲಿಸಲಾಗುತ್ತದೆ.
SCROLL FOR NEXT