ರಾಜ್ಯ

ವಿಧಾನ ಸೌಧಕ್ಕೆ 60 ವರ್ಷ: ಸಾರ್ವಜನಿಕ ವೀಕ್ಷಣೆಗೆ ಅವಕಾಶ

Sumana Upadhyaya
ಬೆಂಗಳೂರು: ವಿಧಾನಸೌಧದಲ್ಲಿ ಸರ್ಕಾರದ ಆಡಳಿತ ಆರಂಭವಾಗಿ ಆರು ದಶಕಗಳು ಕಳೆದಿವೆ. ಇದೀಗ ವಿಧಾನ ಸೌಧವನ್ನು ಜನರಿಗೆ ಪರಿಚಯಿಸಲು ಸರ್ಕಾರ ನಿರ್ಧರಿಸಿದೆ. ಸಾರ್ಜವಜನಿಕರಿಗೆ ಮುಕ್ತ ಪ್ರವೇಶವನ್ನು ಈ ಬಾರಿ ಒದಗಿಸಲಾಗುತ್ತಿದೆ. ವಿಧಾನಸೌಧ ಮತ್ತು ಉಭಯ ಸದನಗಳಲ್ಲಿ ನಡೆಯುವ ಕಲಾಪಗಳ ಕುರಿತು ಸಾಕ್ಷ್ಯ ಚಿತ್ರಗಳು, ಭಾಷಣಗಳ ಆಡಿಯೊ, ಛಾಯಾಚಿತ್ರ ಪ್ರದರ್ಶನ ಮತ್ತು ವಿಧಾನ ಸೌಧದ ವಾಸ್ತುಶಿಲ್ಪಗಳನ್ನು ಜನರು ವೀಕ್ಷಿಸಬಹುದು.
ವಿಧಾನಸೌಧ ನಿರ್ಮಾಣಗೊಂಡು 6 ದಶಕಗಳು ಸಂದ ಹಿನ್ನೆಲೆಯಲ್ಲಿ ಇಬ್ಬರು ಖ್ಯಾತ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ ಮತ್ತು ಟಿ.ಎನ್.ಸೀತಾರಾಮ್ ವಿಧಾನಸೌಧದ ಇತಿಹಾಸ ಮತ್ತು ವಿಧಾನಸಭೆ ಕಲಾಪಗಳ ಕುರಿತು ಸಾಕ್ಷ್ಯಚಿತ್ರಗಳನ್ನು ತಯಾರಿಸಲಿದ್ದಾರೆ. ಈ ಕಿರು ಚಿತ್ರಗಳು ರಂಗ ಮಂದಿರಗಳಲ್ಲಿ ಮತ್ತು ಟಿವಿ ಚಾನೆಲ್ ಗಳಲ್ಲಿ ಪ್ರಸಾರವಾಗಲಿದೆ.
ಮಾಜಿ ಪ್ರಧಾನ ಮಂತ್ರಿ ದಿವಂಗತ ಜವಹರಲಾಲ್ ನೆಹರೂರವರು 1951ರಲ್ಲಿ ವಿಧಾನ ಸೌಧಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. 1956ರಲ್ಲಿ ಕಟ್ಟಡ ನಿರ್ಮಾಣ ಪೂರ್ಣಗೊಂಡಿತ್ತು. ವಿಧಾನಸೌಧ ಯಾವಾಗ ಉದ್ಘಾಟನೆಗೊಂಡಿತು ಎಂಬ ಬಗ್ಗೆ ಅಧಿಕೃತ ಮಾಹಿತಿಯಿಲ್ಲದಿದ್ದರೂ ಕೂಡ 1956ರಿಂದ 1957ರ ಮಧ್ಯೆ ಉದ್ಘಾಟನೆಗೊಂಡಿರಬಹುದು ಎಂದು ಹೇಳಲಾಗುತ್ತಿದೆ. ಇದರ ವಜ್ರ ಮಹೋತ್ಸವವನ್ನು ಈ ವರ್ಷ ಆಚರಿಸಲಾಗುತ್ತಿದೆ. 
ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ಪ್ರತಿನಿಧಿಯೊಂದಿಗೆ ಮಾತನಾಡಿದ ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ, ಸರ್ಕಾರ ವಜ್ರ ಮಹೋತ್ಸವ ಸಂದರ್ಭದಲ್ಲಿ ಸರಣಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ. ಜನರನ್ನು ವಿಧಾನ ಸೌಧದ ಒಳಗೆ ನೋಡಲು ಬಿಡಲಾಗುವುದು. ಈ ಸಂದರ್ಭದಲ್ಲಿ ವಿಶೇಷ ಭದ್ರತೆ ಏರ್ಪಡಿಸಲಾಗುತ್ತದೆ. ಸಾಮಾನ್ಯವಾಗಿ ವಿಧಾನ ಸೌಧದ ಒಳಗೆ ಸಾರ್ವಜನಿಕರಿಗೆ ಪ್ರವೇಶವಿರುವುದಿಲ್ಲ. ಆದರೆ ಈ ಬಾರಿ ಸಾರ್ವಜನಿಕರಿಗೆ ವಿಧಾನ ಸೌಧದ ಒಳಗೆ ಹೋಗಲು ಅವಕಾಶ ನೀಡಲಾಗುವುದು ಎಂದು ಹೇಳಿದರು.
SCROLL FOR NEXT