ರಾಜ್ಯ

ಕರ್ನಾಟಕದಲ್ಲಿ 2,000ಕ್ಕೂ ಅಧಿಕ ಗ್ರಾಮಗಳಲ್ಲಿ ಪದವೀಧರರೇ ಇಲ್ಲ!

Sumana Upadhyaya
ಬೆಂಗಳೂರು: ಇನ್ನೂರಕ್ಕೂ ಅಧಿಕ ಜನಸಂಖ್ಯೆಯನ್ನು ಹೊಂದಿರುವ ರಾಜ್ಯದ 2,070 ಗ್ರಾಮಗಳಲ್ಲಿ ಜನರು ಪದವಿ ಹೊಂದಿಲ್ಲ  ಎಂಬ ಮಾಹಿತಿ ಸಿಕ್ಕಿದೆ. 
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಇತ್ತೀಚೆಗೆ ರಾಜ್ಯದ 30,000ಕ್ಕೂ ಅಧಿಕ ಗ್ರಾಮಗಳಲ್ಲಿ ಸಮೀಕ್ಷೆ ನಡೆಸಿತ್ತು. ಈ ಸಮೀಕ್ಷೆಯನ್ನು ಅಭಿವೃದ್ಧಿ ಆಯುಕ್ತರಿಗೆ ಹಸ್ತಾಂತರಿಸಲಾಗಿದ್ದು ಅದನ್ನು ಕಾಲೇಜು ಶಿಕ್ಷಣಗಳ ಇಲಾಖೆಗೆ ಅವರು ಕಳುಹಿಸಿದ್ದಾರೆ.
ಕಾಲೇಜು ಶಿಕ್ಷಣಗಳ ಇಲಾಖೆ ರಾಜ್ಯದ ಗ್ರಾಮಗಳ ಪದವೀಧರರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಉನ್ನತ ಶಿಕ್ಷಣಕ್ಕಾಗಿ ದಾಖಲಾದ ಮತ್ತು ನಂತರದಲ್ಲಿ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿದವರ ಸಂಖ್ಯೆಯನ್ನು ಇಲಾಖೆ ತೆಗೆದುಕೊಂಡಿದೆ.
ಈ ನಿಟ್ಟಿನಲ್ಲಿ ಕಾಲೇಜು ಶಿಕ್ಷಣಗಳ ಇಲಾಖೆ ವಿಡಿಯೋ ಕಾನ್ಫರೆನ್ಸ್ ನಡೆಸಿದ್ದು ಅದರಲ್ಲಿ 30 ಜಿಲ್ಲೆಗಳ  ಪ್ರಮುಖ ಕಾಲೇಜುಗಳ ಪ್ರಾಂಶುಪಾಲರು ಭಾಗವಹಿಸಿದ್ದರು. ಅವರನ್ನು ಮುಖ್ಯ ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿತ್ತು. ತಾಲ್ಲೂಕು ಕಾಲೇಜುಗಳ ಪ್ರಾಂಶುಪಾಲರನ್ನು ತಾಲ್ಲೂಕು ಮಟ್ಟದ ನೋಡಲ್ ಅಧಿಕಾರಿಯಾಗಿ ನೇಮಿಸಲಾಗಿತ್ತು.
ಈ ಮಧ್ಯೆ, ಪಟ್ಟಿಯಲ್ಲಿ ಹೆಸರಿಸಿರುವ ಗ್ರಾಮಗಳಿಗೆ ಭೇಟಿ ನೀಡಲು ಒಬ್ಬ ಉಪನ್ಯಾಸಕರನ್ನು ನೇಮಿಸಲು ನೋಡಲ್ ಅಧಿಕಾರಿಗೆ ಸೂಚಿಸಲಾಗಿದೆ. ಅವರು ಗ್ರಾಮಗಳಲ್ಲಿರುವವರಲ್ಲಿ ದ್ವಿತೀಯ ಪಿಯುಸಿ ತೇರ್ಗಡೆ ಹೊಂದಿ ಉನ್ನತ ಶಿಕ್ಷಣಕ್ಕೆ ದಾಖಲಾತಿ ಮಾಡಿಕೊಂಡವರ ಬಗ್ಗೆ ಮತ್ತು ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿದವರ ಬಗ್ಗೆ ದಾಖಲೆಗಳನ್ನು ಸಂಗ್ರಹಿಸಲಿದ್ದಾರೆ.
ಪಟ್ಟಿಯಲ್ಲಿ ಸೂಚಿಸಿದಂತೆ,  ಕೋಲಾರ ಜಿಲ್ಲೆ ಮೊದಲ ಸ್ಥಾನದಲ್ಲಿದ್ದು ಇಲ್ಲಿನ 225 ಗ್ರಾಮಗಳಲ್ಲಿ ಪದವೀಧರರೇ ಇಲ್ಲ. ನಂತರದ ಸ್ಥಾನದಲ್ಲಿ ತುಮಕೂರು, ಹಾಸನ ಮತ್ತು ಉತ್ತರ ಕನ್ನಡ ಜಿಲ್ಲೆಗಳಿವೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಶಿವಮೊಗ್ಗ ಜಿಲ್ಲೆಗಳು ಕೂಡ ಪಟ್ಟಿಯಲ್ಲಿವೆ. ಬೆಂಗಳೂರು ನಗರದಲ್ಲಿ 38 ಗ್ರಾಮಗಳಿದ್ದು, ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ 75 ಗ್ರಾಮಗಳಿವೆ.
ದಕ್ಷಿಣ ಕನ್ನಡ ಜಿಲ್ಲೆ ಈ ಪಟ್ಟಿಯಲ್ಲಿಲ್ಲ. ಈ ಬಗ್ಗೆ ಕೇಳಿದಾಗ, ಕಾಲೇಜು ಶಿಕ್ಷಣಗಳ ಇಲಾಖೆಯ ನಿರ್ದೇಶಕ ಸೌಭಾಗ್ಯ, ಅಭಿವೃದ್ಧಿ ಆಯುಕ್ತರಿಂದ ಇಮೇಲ್ ನಲ್ಲಿ ನಮಗೆ ಸಿಕ್ಕಿರುವ ಮಾಹಿತಿಯಿದು ಎನ್ನುತ್ತಾರೆ.
SCROLL FOR NEXT