ರಾಜ್ಯ

ಎಂಎಂ ಕಲಬುರಗಿ ಹಂತಕರು ಪತ್ತೆಯಾಗದಿದ್ದಕ್ಕೆ ವಿಷಾದವಿದೆ: ಜಿ ಪರಮೇಶ್ವರ್

Shilpa D
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರಾಗಿ ಜಿ. ಪರಮೇಶ್ವರ್ ಪುನರಾಯ್ಕೆಯಾದ ಹಿನ್ನೆಲೆಯಲ್ಲಿ ತಮ್ಮ ಗೃಹ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಮ್ಮ ರಾಜಿನಾಮೆ ಪತ್ರ ಸಲ್ಲಿಸಿದ ಬಳಿಕ ವಿಕಾಸ ಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜೀನಾಮೆ ನೀಡಿದ್ದರಿಂದ ನನಗೆ ಹಿಂಬಡ್ತಿ ಸಿಕ್ಕಿದಂತಾಗಿಲ್ಲ. 2018ರ ವಿಧಾನಸಭೆ ಚುನಾವಣೆಗೆ ಹೆಚ್ಚಿನ ಜವಾಬ್ದಾರಿಯೊಂದಿಗೆ ಕೆಲಸ ಮಾಡಲು ರಾಜಿನಾಮೆ ಅನಿವಾರ್ಯ ಎಂದು ಹೇಳಿದ್ದಾರೆ.
ಒಂದು ವೇಳೆ ಕಾಂಗ್ರೆಸ್ ಹೈಕಮಾಂಡ್ ನನಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಹೇಳಿದರೇ ನಾನು ಸ್ಪರ್ದಿಸುತ್ತೇನೆ. ಅಥವಾ ಪರಿಷತ್ ಸದಸ್ಯನಾಗಿ ಮುಂದುವರಿಯುವಂತೆ ಸೂಚಿಸಿದರೇ ಹಾಗೆಯೇ ಮಾಡುತ್ತೇನೆ ಎಂದು ಹೇಳಿದ್ದಾರೆ.
ತಾವು 1 ವರ್ಷ 7 ತಿಂಗಳುಗಳ ಕಾಲ ಗೃಹ ಸಚಿವರಾಗಿ ಕೆಲಸ ನಿರ್ವಹಿಸಿದ್ದು,ಈ ಅವಧಿಯಲ್ಲಿ ಸಹಕರಿಸಿದ ಪೊಲೀಸ್ ಇಲಾಖೆಯ ಪ್ರತಿಯೊಬ್ಬ ಸಿಬ್ಬಂದಿಗೂ ಧನ್ಯವಾದ ಅರ್ಪಿಸಿದರು. 
ಡಾ.ಕಲಬುರ್ಗಿ ಪ್ರಕರಣವನ್ನು ಭೇದಿಸುವಲ್ಲಿ ಇಲಾಖೆ ವಿಫಲವಾಗಿದೆ ಎನ್ನಲು ಸಾಧ್ಯವಿಲ್ಲ. ಈ ಪ್ರಕರಣದಲ್ಲಿ ಸಿಐಡಿ ಅತ್ಯಂತ ಆಳವಾದ ತನಿಖೆ ನಡೆಸುತ್ತಿದೆ. ತನಿಖೆಯ ಸಾಕಷ್ಟುವಿವರಗಳನ್ನು ಬಹಿರಂಗವಾಗಿ ಹೇಳಲು ಆಗುವುದಿಲ್ಲ ಎಂದು ಸಮರ್ಥಿಸಿಕೊಂಡ ಅವರು ಪ್ರಕರಣ ಬಗೆಹರಿಯದಿದ್ದಕ್ಕೆ ನನಗೆ ವಿಷಾದವಿದೆ ಎಂದು ಹೇಳಿದ್ದಾರೆ. 
ನೆರೆಯ ಮಹಾರಾಷ್ಟ್ರದಲ್ಲಿ ಹತ್ಯೆಗೀಡಾದ ಚಿಂತಕರಾದ ಧಾಬೋಲ್ಕರ್‌ ಮತ್ತು ಪಾನ್ಸರೆ ಪ್ರಕರಣದಲ್ಲಿ ಬಳಕೆಯಾದ ಬುಲೆಟ್‌ಗೂ ಹಾಗೂ ಡಾ.ಕಲಬುರ್ಗಿ ಅವರ ಹತ್ಯೆಗೆ ಬಳಸಲಾದ ಬುಲೆಟ್‌ಗೂ ಸಾಮ್ಯತೆ ಇರುವುದನ್ನು ಪೊಲೀಸರು ಖಚಿತಪಡಿಸಿದ್ದಾರೆ. ಎರಡೂ ಪ್ರಕರಣಗಳಿಗೆ ಪರಸ್ಪರ ಸಂಪರ್ಕ ಇರುವುದು ಮೇಲ್ನೋಟಕ್ಕೆ ದೃಢಪಟ್ಟಿದೆ. ಹೀಗಾಗಿ ಇದೊಂದು ಸೂಕ್ಷ್ಮ ತನಿಖೆಯಾಗಿದ್ದು, ನಮ್ಮ ರಾಜ್ಯದ ಪೊಲೀಸರು ಪ್ರಕರಣವನ್ನು ಭೇದಿಸುತ್ತಾರೆ ಎಂಬ ವಿಶ್ವಾಸವಿದೆ. ಆದರೆ ಯಾವಾಗ ಭೇದಿಸುತ್ತಾರೆ ಎಂದು ಕಾಲ ನಿಗದಿ ಮಾಡಲು ಸಾಧ್ಯವಿಲ್ಲ. ಇದೊಂದು ಅತ್ಯಂತ ಜಟಿಲ ಪ್ರಕರಣವಾಗಿದೆ ಎಂದು ಹೇಳಿದರು.
SCROLL FOR NEXT