ಬೆಂಗಳೂರು: ವೈಯಕ್ತಿಕ ದ್ವೇಷದ ಹಿನ್ನಲೆಯಲ್ಲಿ ಬಿಜೆಪಿ ನಾಯಕನನ್ನು ಕೊಲೆ ಮಾಡಲಾಗಿದ್ದು, ಹತ್ಯೆ ಹಿಂದೆ ಯಾವುದೇ ರಾಜಕೀಯ ದ್ವೇಷವಿಲ್ಲ ಎಂದು ಬೆಂಗಳೂರು ಗ್ರಾಮಾಂತರ ಪೊಲೀಸರು ಶುಕ್ರವಾರ ಹೇಳಿದ್ದಾರೆ.
ಆನೇಕಲ್ ಸೂರ್ಯನಗರದಲ್ಲಿ ಅನೇಕಲ್ ತಾಲೂಕು ಬಿಜೆಪಿ ಎಸ್ಸಿ ಎಸ್ಟಿ ಮೋರ್ಚಾದ ಉಪಾಧ್ಯಕ್ಷ ಹರೀಶ್ ಎಂಬುವವರನ್ನು ದುಷ್ಕರ್ಮಿಗಳು ಡ್ಯಾಗರ್ ನಿಂದ ಚುಚ್ಚಿ ದಾರುಣವಾಗಿ ಹತ್ಯೆ ಮಾಡಿದ್ದರು.
ಪ್ರಕರಣದ ಪ್ರಮುಖ ಆರೋಪಿಯಾಗಿರುವ ರಾಜು ಎಂಬಾತ ಬಂಧನದ ವೇಳೆ ಹಿರಿಯ ಪೊಲೀಸ್ ಅಧಿಕಾರಿಯ ಮೇಲೆಯೇ ದಾಳಿ ನಡೆಸಿದ್ದ. ಈ ವೇಳೆ ಪೊಲೀಸರು ರಾಜು ಮೇಲೆ ಗುಂಡಿನ ದಾಳಿ ನಡೆಸಿ ಬಂಧನಕ್ಕೊಳಪಡಿಸಿದ್ದಾರೆ. ಆರೋಪಿ ರಾಜುಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣ ಸಂಬಂಧ ರಾಜು, ಸಂದೀಪ್, ಕಾರ್ತಿಕ್ ಮತ್ತು ಸಂತೋಷ್ ಎಂಬ ನಾಲ್ವರು ಆರೋಪಿಗಳನ್ನು ಬಂಧನಕ್ಕೊಳಪಡಿಸಲಾಗಿದೆ. ತನಿಖೆ ವೇಳೆ ರಾಜು ಸತ್ಯ ಬಾಯ್ಬಿಟ್ಟಿದ್ದಾನೆ.
ಆನೇಕಲ್ ನಲ್ಲಿ ಅಧಿಪತ್ಯ ಸಾಧಿಸಲು ಹರೀಶ್ ಯತ್ನಿಸುತ್ತಿದ್ದ. ಕೆರೆಯಲ್ಲಿ ಮೀನು ಹಿಡಿಯುವ ವಿಚಾರವಾಗಿ ನನ್ನ ಸಹೋದರರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದ. ಈ ಹಿನ್ನಲೆಯಲ್ಲಿ ಹರೀಶ್ ನನ್ನು ಕೊಲೆ ಮಾಡಲಾಗಿತ್ತು ಎಂದು ರಾಜು ಹೇಳಿಕೊಂಡಿದ್ದಾನೆ. ಪ್ರಕರಣದಲ್ಲಿ ಮತ್ತಿಬ್ಬರು ಆರೋಪಿಗಳೂ ಕೂಡ ಭಾಗಿಯಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics