ಹುಬ್ಬಳ್ಳಿ: 3 ವರ್ಷಗಳ ಕಾಲ ತಾನು ಎದುರಿಸಿದ ಲೈಂಗಿಕ ಗುಲಾಮಗಿರಿ ವಿರುದ್ಧ ಕೊನೆಗೂ ತಿರುಗಿ ಬಿದ್ದಿರುವ ಮಹಿಳೆಯೊಬ್ಬರು ನ್ಯಾಯ ಕೊಡಿಸುವಂತೆ ಕಣ್ಣೀರಿಡುತ್ತಿದ್ದಾರೆ...
ಅಡುಗೆ ಮಾಡುವ ಕೆಲಸ ಮಾಡಿಕೊಂಡಿದ್ದ ಮಹಿಳೆಯೊಬ್ಬರು ಕೆಲ ವರ್ಷಗಳ ಹಿಂದೆ ಪ್ರೀತಿಗೆ ಬಿದ್ದಿದ್ದರು. ಪ್ರೀತಿಸಿದಾತನೇ ಮಹಿಳೆಯನ್ನು ಲೈಂಗಿಕ ಗುಲಾಮಗಿರಿಗೆ ತಳ್ಳಿದ್ದ. ಕಾರವಾರ ರಸ್ತೆಯಲ್ಲಿರುವ ಸರ್ಕಾರಿ ಕಚೇರಿ ಬಳಿ ಮಹಿಳೆಯನ್ನು ಬಲವಂತವಾಗಿ ಕರೆದುಕೊಂಡು ಹೋಗುತ್ತಿದ್ದ ಆತ ಸ್ನೇಹಿತರೊಂದಿಗೆ ಕೂಡಿ ಮೂರು ವರ್ಷಗಳ ಕಾಲ ನಿರಂತರ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಮಹಿಳೆ ಗರ್ಭಿಣಿಯಾಗುತ್ತಿದ್ದಂತೆಯೇ ಆಕೆಗೆ ಬೆದರಿಕೆ ಹಾಕಿ ಪರಾರಿಯಾಗಿದ್ದಾರೆ.
ಗರ್ಭಿಣಿಯಾಗಿದ್ದ ಮಹಿಳೆ 6 ತಿಂಗಳ ಹಿಂದಷ್ಟೇ ಹುಬ್ಬಳ್ಳಿಯ ದುರ್ಗದಬೈಲ್ ನಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ. ಆಸ್ಪತ್ರೆಯಿಂದ ಬಿಡುಗಡೆಯಾಗುವ ವೇಳೆ ಮಹಿಳೆ ಮಗು ಬೇಡ ಎಂದು ಹೇಳಿಕೊಂಡಿದ್ದಾಳೆ. ಅಲ್ಲದೆ ಆಸ್ಪತ್ರೆಯ ಸಿಬ್ಬಂದಿಗಳಿಗೆ ತನ್ನ ಜೀವನದಲ್ಲಿ ನಡೆದಿರುವ ಕಹಿ ಘಟನೆಗಳನ್ನು ವಿವರಿಸಿದ್ದಾಳೆ.
ಮಹಿಳೆಯ ಕಥೆ ಕೇಳಿದ ಆಸ್ಪತ್ರೆಯ ಸಿಬ್ಬಂದಿಗಳು ಆಕೆಗೆ ಧೈರ್ಯ ಹೇಳಿ ಪೊಲೀಸರಿಗೆ ದೂರು ಕೊಡಿಸಿದ್ದಾರೆ. ದೂರು ನೀಡಿ 6 ತಿಂಗಳಾದರೂ ಮಹಿಳೆಗೆ ಈ ವರೆಗೂ ಯಾವುದೇ ನ್ಯಾಯ ದೊರಕಿಲ್ಲ. ಮಗುವಿಗೆ ಈಗಾಗಲೇ 6 ತಿಂಗಳು ತುಂಬಿದ್ದು, ನ್ಯಾಯದ ನಿರೀಕ್ಷೆಯಲ್ಲಿಯೇ ಮಹಿಳೆ ಈಗಲೂ ಕಣ್ಣೀರು ಹಾಕುತ್ತಿದ್ದಾರೆ. ಪ್ರಸ್ತುತ ಮಗುವನ್ನು ಅನಾಥಾಶ್ರಮವೊಂದು ನೋಡಿಕೊಳ್ಳುತ್ತಿದೆ.
ದೂರು ನೀಡಿ 6 ತಿಂಗಳಾಗಿದ್ದರೂ. ತನಿಖೆಯಲ್ಲಿ ಯಾವುದೇ ಪ್ರಗತಿಗಳು ಬಂದಿಲ್ಲ. ಕೇವಲ ಆರೋಪಿಗಳ ಕುರಿತಂತೆ ಸುಳಿವುಗಳು ಮಾತ್ರ ದೊರಕಿದೆ ಎಂದು ಪೊಲೀಸರು ಹೇಳುತ್ತಿದ್ದಾರೆ.
ಪೊಲೀಸ್ ಆಯುಕ್ತ ಪಾಂಡುರಂಗ ರಾಣೆಯವರು ಮಾತನಾಡಿ, ಇದೊಂದು ಅತ್ಯಂತ ಸೂಕ್ಷ್ಮ ಪ್ರಕರಣವಾಗಿದೆ. ಸಂತ್ರಸ್ತೆಗೆ ನ್ಯಾಯ ದೊರಕಿಸುತ್ತೇವೆ. ಶೀಘ್ರದಲ್ಲಿಯೇ ಆರೋಪಿಗಳನ್ನು ಬಂಧನಕ್ಕೊಳಪಡಿಸುತ್ತೇವೆಂದು ಹೇಳಿದ್ದಾರೆ.