ಬೆಂಗಳೂರು: ಮಂಗಳೂರು ವಿಮಾನ ನಿಲ್ಧಾಣ ಈಗಿರುವ ಸ್ಥಳದಿಂದ ಸ್ಥಳಾಂತರಗೊಳ್ಳುವ ಸಾಧ್ಯತೆಯಿದೆ. ಹೊಸ ವಿಮಾನ ನಿಲ್ದಾಣದ ಅಭಿವೃದ್ಧಿಗೆ ಉಡುಪಿ ಮತ್ತು ಮಂಗಳೂರು ನಡುವೆ ಬದಲಿ ಸ್ಥಳದ ಸಾಧ್ಯತಾ ಅಧ್ಯಯನದಲ್ಲಿ ರಾಜ್ಯ ಸರ್ಕಾರ ತೊಡಗಿದೆ. ನಿನ್ನೆ ವಿಧಾನ ಪರಿಷತ್ತಿನಲ್ಲಿ ಬಿಜೆಪಿಯ ಗಣೇಶ್ ಕಾರ್ಣಿಕ್ ಅವರು ಎತ್ತಿದ ಪ್ರಶ್ನೆಗೆ ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ ಉತ್ತರಿಸಿದರು.
ಈಗಿರುವ ವಿಮಾನ ನಿಲ್ದಾಣದಲ್ಲಿ ವಿಮಾನ ಸುರಕ್ಷಿತವಾಗಿ ಇಳಿಯಲು ನಿರ್ಣಾಯಕ ಕಡ್ಡಾಯ ಅವಶ್ಯಕತೆಗೆ ರನ್ ವೇಗಳ ವಿಸ್ತರಣೆಗೆ 33 ಎಕರೆಗಳಷ್ಟು ಜಮೀನು ವಿಸ್ತರಣೆಗೆ ಸಹ ಸಾಧ್ಯತೆಯನ್ನು ಪರೀಕ್ಷಿಸಲಾಗುತ್ತಿದ ಎಂದು ಅವರು ಹೇಳಿದರು.
ನೆರೆಯ ಕೇರಳ ರಾಜ್ಯದಲ್ಲಿ ಹೆಚ್ಚೆಚ್ಚು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು ತಲೆ ಎತ್ತುತ್ತಿವೆ ಎಂದು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ಸದಸ್ಯರು ಈ ಹಿಂದೆ ಹೇಳಿದ್ದರು. ಇದರಿಂದ ವಾಯು ಸಂಚಾರದ ಒತ್ತಡ ಕಡಿಮೆಯಾಗುತ್ತಿದ್ದು, ಇದೇ ರೀತಿ ಮಂಗಳೂರು ವಿಮಾನ ನಿಲ್ದಾಣವನ್ನು ಕೂಡ ಅಭಿವೃದ್ಧಿ ಪಡಿಸಬೇಕೆಂದು ಅವರು ಒತ್ತಾಯಿಸಿದರು.
ಇತ್ತೀಚೆಗೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಹಿರಿಯ ಅಧಿಕಾರಿ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳನ್ನು ಭೇಟಿ ಮಾಡಿ ಈಗಿರುವ ಮಂಗಳೂರು ವಿಮಾನ ನಿಲ್ದಾಣವನ್ನು ಉನ್ನತ ದರ್ಜೆಗೇರಿಸಲು 4 ವಿವಿಧ ಆಯ್ಕೆಗಳನ್ನು ಮುಂದಿಟ್ಟಿದ್ದರು.