ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ವಿವಿಧ ಕನ್ನಡ ಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿರುವಂತೆಯೇ ರಾಜಧಾನಿ ಬೆಂಗಳೂರಿನ ಹಲವೆಡೆ ಕೆಲ ಆಟೋ ಚಾಲಕರು ದುಬಾರಿ ಹಣ ಕೇಳುತ್ತಿರುವ ಕುರಿತು ವರದಿಯಾಗಿದೆ.
ಬೆಂಗಳೂರಿನ ಗೊರಗುಂಟೆ ಪಾಳ್ಯ, ಕಾಮಾಕ್ಷಿ ಪಾಳ್ಯ, ಸಿಲ್ಕ್ ಬೋರ್ಡ್ ಸೇರಿದಂತೆ ಮತ್ತಿತರ ಕಡೆಗಳಲ್ಲಿ ಕೆಲ ಆಟೋ ಚಾಲಕರು ದುಬಾರಿ ಹಣ ಕೇಳುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನಲೆಯಲ್ಲಿ ಕ್ರಮಕ್ಕೆ ಮುಂದಾಗಿರುವ ಬೆಂಗಳೂರು ಪೊಲೀಸರು ಆಟೋ ಚಾಲಕರು ದುಬಾರಿ ಹಣ ಕೇಳಿದರೆ ದೂರು ನೀಡುವಂತೆ ಕೇಳಿದ್ದಾರೆ. ಈ ಸಂಬಂಧ ಪೊಲೀಸ್ ಇಲಾಖೆ ಸಹಾಯವಾಣಿ ಸಂಖ್ಯೆ ಕೂಡ ತೆರೆದಿದ್ದು, ದೂರವಾಣಿ ಕರೆ ಮತ್ತು ಎಸ್ ಎಸ್ ಎಂಎಸ್ ಮತ್ತು ವಾಟ್ಸಪ್ ಮೂಲಕವೂ ಗ್ರಾಹಕರು ದೂರು ನೀಡಲು ಅನುವಾಗುವಂತೆ ದೂರವಾಣಿ ಸಂಖ್ಯೆ ನೀಡಿದ್ದಾರೆ.
ಬೆಂಗಳೂರು ಟ್ರಾಫಿಕ್ ಪೊಲೀಸ್ ಹಾಗೂ ಬೆಂಗಳೂರು ಪೊಲೀಸರ ಸಂಖ್ಯೆಗೆ ದೂರು ನೀಡುವಂತೆ ಪೊಲೀಸರು ಸಂಖ್ಯೆ ನೀಡಿದ್ದಾರೆ. ಏರ್ ಟೆಲ್ ಗ್ರಾಹಕರು 52225ಕ್ಕೆ ಎಸ್ ಎಂಎಸ್ ಕಳುಹಿಸುವ ಮೂಲಕ ಮತ್ತು ನಾನ್ ಏರ್ ಟೆಲ್ ಗ್ರಾಹಕರು 966395225 ನಂಬರ್ ಗೆ ಎಸ್ ಎಂಎಸ್ ಮಾಡಬಹುದಾಗಿದೆ. ಅಂತೆಯೇ ಆಟೋ ಚಾಲಕರಿಂದೆ ತೊಂದರೆಯಾದರೆ 080-25588444 / 555 ಈ ಸಂಖ್ಯೆಗೆ ಕರೆ ಮಾಡಬಹುದಾಗಿದೆ. ಇನ್ನುಳಿದಂತೆ ಟ್ರಾಫಿಕ್ ಸಹಾಯವಾಣಿ 1095, 080-2294 3030, 131 ಸಂಖ್ಯೆಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿವೆ.
ಬಯಲು ಸೀಮೆಗೆ ಶಾಶ್ವತ ನೀರಾವರಿ, ಮಹದಾಯಿ-ಕಳಸಾ ಬಂಡೂರಿ ಯೋಜನೆಯ ತ್ವರಿತ ಜಾರಿ, ಮೇಕೆದಾಟು ಯೋಜನೆ ಜಾರಿ, ರೈತರ ಸಾಲ ಮನ್ನಾ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ವಿವಿಧ ಕನ್ನಡ ಪರ ಸಂಘಟನೆಗಳು ಇಂದು ಬಂದ್ ಆಚರಣೆ ಮಾಡುತ್ತಿವೆ.