ಬೆಂಗಳೂರು: ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ ವಿಧೇಯಕ- 2017 ಅನ್ನು ಗುರುವಾರ ವಿಧಾನಸಭೆಯಲ್ಲಿ ಅವಿರೋಧವಾಗಿ ಅಂಗೀಕಾರ ನೀಡಲಾಯಿತು.
ಹಣಕಾಸು ಸಚಿವರಾಗಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಇಂದು ವಿಧಾನಸಭೆಯಲ್ಲಿ ವಿಧೇಯಕವನ್ನು ಮಂಡಿಸಿ, ಮಸೂದೆ ಕುರಿತು ವಿವರಿಸಿದರು. ಸುದೀರ್ಘ ಚರ್ಚೆಯ ನಂತರ ಜಿಎಸ್ ಟಿ ವಿಧೇಯಕಕ್ಕೆ ಒಪ್ಪಿಗೆ ನೀಡಲಾಯಿತು.
ಈ ವೇಳೆ ಮಾತನಾಡಿದ ಸಿಎಂ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಜಿಎಸ್‌ಟಿ ಕಾಯ್ದೆಗೆ ಪೂರಕವಾಗಿ ವಿಧೇಯಕವನ್ನು ಮಂಡಿಸಲಾಗಿದೆ. ಇಲ್ಲಿ ನಡೆಯುವ ಚರ್ಚೆಗಳಿಂದ ಬದಲಾವಣೆಗಳು ಅಸಾಧ್ಯ. ಆದರೂ, ಇಲ್ಲಿ ವ್ಯಕ್ತವಾದ ಅಭಿಪ್ರಾಯಗಳನ್ನು ಜಿಎಸ್‌ಟಿ ಮಂಡಳಿ ಗಮನಕ್ಕೆ ತರಲಾಗುವುದು ಎಂದು ಹೇಳಿದರು.
ಈ ಕುರಿತು ಮಾತನಾಡಿದ ಬಿಜೆಪಿಯ ವಿಶ್ವೇಶ್ವರಯ್ಯ ಹೆಗಡೆ ಕಾಗೇರಿ, ಕೇಂದ್ರ ಸರ್ಕಾರ ಜಾರಿಗೆ ತರುವ ಮುನ್ನ ರಾಜ್ಯ ಸರ್ಕಾರ ವಿಧೇಯಕವನ್ನು ಮಂಡಿಸಿ ಅಂಗೀಕಾರ ಪಡೆಯಬೇಕಾಗಿತ್ತು. ಆ ಮೂಲಕ ಈ ವಿಚಾರದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ ಎಂಬುದನ್ನು ತೋರಿಸುವ ಮೂಲಕ ಮಾದರಿಯಾಗಬೇಕಿತ್ತು ಎಂದರು.
ಮಸೂದೆ ಕುರಿತಂತೆ ವರ್ತಕರಲ್ಲಿ ಇನ್ನೂ ಗೊಂದಲ ಇದೆ. ಈ ಕುರಿತಂತೆ ಹೆಚ್ಚಿನ ಪ್ರಚಾರ ಮಾಡಬೇಕಾಗಿತ್ತು. ಅವರಿಗೆ ತಿಳುವಳಿಕೆ ಮೂಡಿಸಬೇಕಾಗಿತ್ತು ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಕೃಷಿ ಸಚಿವ ಕೃಷ್ಣಬೈರೇಗೌಡ, ಜಿಎಸ್‌ಟಿ ನೋಂದಣಿಯಲ್ಲಿ ನಾವು ದೇಶದಲ್ಲೇ ನಂ. 1 ಸ್ಥಾನದಲ್ಲಿದ್ದೇವೆ. ಜಿಎಸ್‌ಟಿ ಜಾರಿಗೆ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳುವಲ್ಲಿಯೂ ಮುಂದಿದ್ದೇವೆ. ವರ್ತಕರಲ್ಲಿ ಯಾವುದೇ ಗೊಂದಲ ಇಲ್ಲ ಸ್ಪಷ್ಟಪಡಿಸಿದರು.