ಬೆಂಗಳೂರು: ಜೂ.17 ರಂದು ನಮ್ಮ ಮೆಟ್ರೋದ ಮೊದಲ ಹಂತ ಪೂರ್ಣಪ್ರಮಾಣದಲ್ಲಿ ಲೋಕಾರ್ಪಣೆಗೊಳ್ಳಲಿದ್ದು ಜೂ.18 ರಿಂದ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಲಿದೆ.
ಫೇಸ್-1 ರ ಕಾರ್ಯಾರಂಭವಾಗುವ ಮೂಲಕ ಬೆಂಗಳೂರು ಮೆಟ್ರೋ ಭಾರತದ 2ನೇ ಅತೀ ದೊಡ್ಡ ಮೆಟ್ರೋ ರೈಲು ಜಾಲ ಎಂಬ ಕೀರ್ತಿಗೆ ಭಾಜನವಾಗಿದೆ. ಆದರೆ ರಾಜ್ಯ ರಾಜಧಾನಿಯ ಜನರು ಮೆಟ್ರೋದಲ್ಲಿ ಸಂಚರಿಸುವುದಕ್ಕೆ ರಾಷ್ಟ್ರರಾಜಧಾನಿ ದಿಲ್ಲಿ ಜನರಿಗಿಂತಲೂ ಹೆಚ್ಚು ಖರ್ಚು ಮಾಡಬೇಕಿದೆ. ಹೌದು, ಸಧ್ಯಕ್ಕೆ ದೆಹಲಿ ಮೆಟ್ರೋಗಿಂತಲೂ ಬೆಂಗಳೂರಿನ ನಮ್ಮ ಮೆಟ್ರೋ ದುಬಾರಿ ಪ್ರಯಾಣ ದರ ಹೊಂದಿದೆ
ದೆಹಲಿಯ ಎರಡು ಹಂತದ ಮೆಟ್ರೋ ಇತ್ತೀಚೆಗಷ್ಟೇ ಪ್ರಯಾಣ ದರವನ್ನು ಕಡಿಮೆ ಮಾಡಿರುವುದಾಗಿ ಹೇಳಿದೆ. 2 ಕಿ.ಮೀ ವರೆಗಿನ ಪ್ರಯಾಣ ದರ ರೂಪಾಯಿ 10, 5 ಕಿಮೀ ವರೆಗಿನ ಪ್ರಯಾಣ ದರ ರೂ.15, 12 ಕಿ.ಮೀ ಗೆ ರೂ.20, 12-20 ಕಿಮೀ ವರೆಗಿನ ಪ್ರಯಾಣ ದರ ರೂ.30, 21-32 ಕಿ.ಮೀ ವರೆಗಿನ ಪ್ರಯಾಣ ದರ 40 ರೂಪಾಯಿ ಹಾಗೂ 32 ಕ್ಕೂ ಹೆಚ್ಚು ಕಿ.ಮೀ ಪ್ರಯಾಣ ದರ 50 ರೂಪಾಯಿಯಾಗಿದೆ.
ಆದರೆ ಬೆಂಗಳೂರಿನ ಉತ್ತರ-ದಕ್ಷಿಣ ಭಾಗದ ಮೆಟ್ರೋ 24 ಕಿಮೀಟರ್ ಗಳಷ್ಟು ವ್ಯಾಪ್ತಿಯಲ್ಲಿ ಸಂಚರಿಸಲಿದ್ದು, 60 ರೂಪಾಯಿ ದರ ನಿಗದಿಪಡಿಸಲಾಗಿದೆ. ಅಷ್ಟೇ ದೂರದ ಪ್ರಯಾಯಣ ದರ ದೆಹಲಿಯಲ್ಲಿ ಕೇವಲ 40ರೂಪಾಯಿಯಾಗಿದೆ. ಮೆಟ್ರೋದಲ್ಲಿ ದುಬಾರಿ ಪ್ರಯಾಣದ ವಿಷಯವನ್ನು ವಿಧಾನಸಭೆಯ ಅಧಿವೇಶನದಲ್ಲಿ ಮಾಜಿ ಸಚಿವ ಸುರೇಶ್ ಕುಮಾರ್ ಪ್ರಸ್ತಾಪಿಸಿದ್ದು, ಹೆಚ್ಚಿನ ಪ್ರಯಾಣ ದರದ ಬಗ್ಗೆ ಬಿಎಂಆರ್ ಸಿಎಲ್ ಗಮನ ಹರಿಸಲಿದೆ ಎಂದು ಸಚಿವ ಕೆಜೆ ಜಾರ್ಜ್ ಹೇಳಿದ್ದಾರೆ.