ಹಿರಿಯ ಪತ್ರಕರ್ತ ರವಿ ಬೆಳಗೆರೆ
ಧಾರವಾಡ: ಅನಾರೋಗ್ಯ ಹಿನ್ನಲೆಯಲ್ಲಿ ಹಿರಿಯ ಪತ್ರಕರ್ತ ರವಿ ಬೆಳಗೆರೆ ಹುಬ್ಬಳ್ಳಿಯ ಎಸ್.ಡಿ.ಎಂ ಆಸ್ಪತ್ರೆಗೆ ದಾಖಲಾಗಿದ್ದಾರೆಂದು ಶನಿವಾರ ತಿಳಿದುಬಂದಿದೆ.
ಇಂದು ಬೆಳಿಗ್ಗೆ ಅತೀವ ಎದೆ ನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ಧಾರವಾಡದ ಎಸ್ ಡಿಎಂ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಗಳು ತಿಳಿಸಿವನೆ.
ರವಿ ಬೆಳಗೆರೆ ತಮ್ಮ 'ಹಾಯ್ ಬೆಂಗಳೂರು' ಪತ್ರಿಯಲ್ಲಿ ಮಾನಹಾನಿ ವರದಿ ಪ್ರಕಟಿಸಿದ್ದ ಹಿನ್ನಲೆಯಲ್ಲಿ 2015-16ನೇ ಸಾಲಿನ ಹಕ್ಕು ಬಾಧ್ಯತೆಗಳ ಸಮಿತಿಯ 2ನೇ ವರದಿಯ ಪ್ರಕಾರ 1 ವರ್ಷ ಜೈಲು ಶಿಕ್ಷೆ ಹಾಗೂ ರೂ.10 ಸಾವಿರ ದಂಡ ವಿಧಿಸಬೇಕೆಂದು ಇತ್ತೀಚೆಗೆ ನಡೆದ ಅಧಿವೇಶನದಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು.
ಇದರಂತೆ ಬೆಳಗೆರೆ ಅವರನ್ನು ಬಂಧಿಸುವ ಸಲುವಾಗಿ ಬೆಂಗಳೂರಿನ ಸಿಸಿಬಿ ತಂಡ ಧಾರವಾಡಕ್ಕೆ ತಲುಪಿತ್ತು. ಆದರೆ, ಇದೀಗ ರವಿಬೆಳಗೆರೆಯವರಿಗೆ ಅನಾರೋಗ್ಯ ಉಂಟಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರವಿ ಬೆಳಗೆರೆ ವಿರುದ್ದ ಪೊಲೀಸ ಬಳಿ ಈಗಾಗಲೇ ಬಂಧನ ಆದೇಶವಿರುವುದರಿಂದ ಪೊಲೀಸರು ಎಸ್ ಡಿಎಂ ಆಸ್ಪತ್ರೆಯ ಎದುರೇ ಬೀಡು ಬಿಟ್ಟಿದ್ದಾರೆಂದು ಮೂಲಗಳು ತಿಳಿಸಿವೆ.
ಶಿಕ್ಷೆ ಕುರಿತಂತೆ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ರವಿಬೆಳಗೆರೆಯವರು, ಶಿಕ್ಷೆ ವಿರುದ್ದ ನಾನು ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ನಲ್ಲಿ ಹೋರಾಟ ಮಾಡುತ್ತೇನೆ. ನಾನೊಬ್ಬ ಪತ್ರಕರ್ತ. ನಾನು ಸರ್ಕಾರದ ವಿರುದ್ಧ ಬರೆಯುತ್ತೇನೆ. ನನ್ನ ಹಕ್ಕನ್ನು ಯಾರೂ ಕಿತ್ತುಕೊಳ್ಳುವ ಹಾಗಿಲ್ಲ. ರಾಜ್ಯ ಸರ್ಕಾರ ನನಗೆ ಹಿಂಸೆ ನೀಡಿದೆ. ಪ್ರಸ್ತುತ ಇರುವ ಆಡಳಿತಾರೂಢ ಸರ್ಕಾರ ಇನ್ನೂ ಒಂದೂ ವರ್ಷ ಅಧಿಕಾರ ನಡೆಸಲಿದೆ. ನಂತರ, ಇತಿಹಾಸಕ್ಕೆ ಸೇರಲಿದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics