ರಾಜ್ಯದಲ್ಲಿ ಬಿಜೆಪಿ ರ್ಯಾಲಿಯ ಸಂಗ್ರಹ ಚಿತ್ರ
ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಸನಿಹದಲ್ಲಿರುವಾಗ ಈ ಮುಂಗಾರು ಋತುವಿನಲ್ಲಿ ಕರ್ನಾಟಕದಲ್ಲಿ ರಾಜಕೀಯ ಪಕ್ಷಗಳ ರ್ಯಾಲಿಗಳು ಗರಿಗೆದರುತ್ತಿವೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಈಗಾಗಲೇ ರಾಜ್ಯಾದ್ಯಂತ ಸಂಪರ್ಕ ಕಾರ್ಯಕ್ರಮ ಕೈಗೊಂಡಿದ್ದರೆ ಆಡಳಿತಾರೂಢ ಕಾಂಗ್ರೆಸ್ ಮುಂದಿನ ತಿಂಗಳು ಕೆಲವು ರಾಜಕೀಯ ರ್ಯಾಲಿಗಳನ್ನು ನಡೆಸಲು ಉದ್ದೇಶಿಸಿದೆ.
ತಮ್ಮ ಹಿಂದಿನ ರಾಜ್ಯ ಭೇಟಿ ಸಂದರ್ಭದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ಪಕ್ಷಯ ರ್ಯಾಂಕ್ ಮತ್ತು ದಾಖಲೆಗಳನ್ನು ಪೋಲ್ ಮೋಡ್ ನಲ್ಲಿಡಲು 5 ದಿವಸ ಬೆಂಗಳೂರಿನಲ್ಲಿ ತಂಗಿದ್ದರು. ಈ ವಾರ ಮತ್ತೆ ಅವರು ದೀರ್ಘಾವಧಿಯ ರಾಜ್ಯ ಭೇಟಿಗಾಗಿ ಆಗಮಿಸುತ್ತಿದ್ದು, ರಾಜಕೀಯ ರ್ಯಾಲಿಗಳ ಪರಿಶೀಲನೆ ನಡೆಸಲಿದ್ದಾರೆ.
ಮೊದಲ ಮೆಗಾ ರ್ಯಾಲಿ ಇದೇ 29ರಂದು ಕೂಡಲಸಂಗಮದಲ್ಲಿ ನಡೆಯಲಿದ್ದು, ಅಲ್ಲಿ ಕೆಪಿಸಿಸಿ ನೂತನ ಕಾರ್ಯಾಧ್ಯಕ್ಷ ಎಸ್.ಆರ್.ಪಾಟೀಲ್ ಔಪಚಾರಿಕವಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಮುಖ್ಯಮಂತ್ರಿ ಸಿದ್ದರಮಯ್ಯ, ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಮತ್ತು ಪಕ್ಷದ ಇತರ ಹಿರಿಯ ಮುಖಂಡರು ರ್ಯಾಲಿಯಲ್ಲಿ ಭಾಗವಹಿಸಲಿದ್ದಾರೆ.
ಇಂತಹದೇ ಮೆಗಾ ರ್ಯಾಲಿಗಳು ಜುಲೈ 3ರಂದು ಮೈಸೂರು ಹಾಗೂ ಮಂಗಳೂರಿನಲ್ಲಿ ಜುಲೈ 7ರಂದು ನಡೆಯಲಿದೆ. ಕಲಬುರಗಿಯಲ್ಲಿ ನಡೆಯಲಿರುವ ಉದ್ದೇಶಿತ ರ್ಯಾಲಿಯ ದಿನಾಂಕವನ್ನು ಹಿರಿಯ ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಕೆಪಿಸಿಸಿ ಹಿರಿಯ ಕಾರ್ಯದರ್ಶಿಗಳ ಜೊತೆ ಚರ್ಚೆ ನಡೆಸಿ ತೀರ್ಮಾನಿಸಲಾಗುತ್ತದೆ.
ಜಿಲ್ಲಾ ಕಾಂಗ್ರೆಸ್ ಘಟಕಗಳ ಕಾರ್ಯಕಾರಿ ಸಮಿತಿ ಸಭೆಯಲ್ಲಿ ವೇಣುಗೋಪಾಲ್ ಅವರು ಭಾಗವಹಿಸಲಿದ್ದು, ಬೂತ್ ಮಟ್ಟದ ಸಮಿತಿಗಳನ್ನು ರಚಿಸುವ ಮೂಲಕ ಚುನಾವಣಾ ಸಿದ್ಧತೆಗಳ ಬಗ್ಗೆ ಸಭೆ ನಡೆಸಲಿದ್ದಾರೆ. ಜಿಲ್ಲಾ ಮಟ್ಟದ ಕಾರ್ಯಕಾರಿ ಸಮಿತಿಯ ಮೊದಲ ಸಭೆ ಇದೇ 30ರಂದು ಬೆಳಗಾವಿಯಲ್ಲಿ ನಡೆಯಲಿದೆ. ಅಲ್ಲಿ ಅವರು ಚಿಕ್ಕಾಬಳ್ಳಾಪುರ, ಕೋಲಾರ, ಬಳ್ಳಾರಿ ಮತ್ತು ವಿಜಯಪುರ ಜಿಲ್ಲೆಗಳ ಪಕ್ಷದ ನಾಯಕರೊಂದಿಗೆ ಮಾತುಕತೆ ನಡೆಸಲಿದ್ದಾರೆ.
ಕೊಳಗೇರಿಯತ್ತ ಬಿಜೆಪಿ ನಡಿಗೆ: ಮುಂದಿನ ಸೆಪ್ಟೆಂಬರ್ ನಲ್ಲಿ ಪಕ್ಷದ ಸಿದ್ದಾಂತಜ್ಞ ದೀನ ದಯಾಳ್ ಉಪಾಧ್ಯಾಯ ಅವರ ಜನ್ಮ ಶತಮಾನೋತ್ಸವದ ಅಂಗವಾಗಿ ಬಿಜೆಪಿ ಕೊಳಗೇರಿಯತ್ತ ಪ್ರಯಾಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಿದೆ. ಬೆಂಗಳೂರಿನ ಗಾಂಧಿನಗರ ಕ್ಷೇತ್ರದಿಂದ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ದಲಿತರ ಮನೆಗಳಲ್ಲಿ ರಾತ್ರಿಯಿಡೀ ಉಳಿಯಲಿರುವ ಪಕ್ಷದ ಮುಖಂಡರು ರಾಜ್ಯಾದ್ಯಂತ ಕಾರ್ಯಕ್ರಮದ ಅಂಗವಾಗಿ ದಲಿತರ ಕಾಲೊನಿಗಳಲ್ಲಿ ಪಾದಯಾತ್ರೆಗಳನ್ನು ಕೈಗೊಳ್ಳಲಿದ್ದಾರೆ.