ಅಲಸೂರು ಗುರುದ್ವಾರ ಸಮೀಪ ಸೋರಿಕೆಯಾಗುತ್ತಿರುವ ಕೊಳವೆ ಮಾರ್ಗ
ಬೆಂಗಳೂರು: ಕಳೆದ 40 ವರ್ಷಗಳಲ್ಲಿ ಈ ವರ್ಷ ಬೆಂಗಳೂರು ನಗರದಲ್ಲಿ ಕುಡಿಯುವ ನೀರಿಗೆ ತೀವ್ರ ಬರಗಾಲ ಉಂಟಾಗಿದೆ. ಇಂತಹ ಪರಿಸ್ಥಿತಿಯಿದ್ದರೂ ನೀರು ಪೋಲಾಗುವುದು ಮಾತ್ರ ನಿಂತಿಲ್ಲ. ಅಲಸೂರಿಗೆ ಕುಡಿಯುವ ನೀರು ಪೂರೈಕೆ ಮಾಡುವ ಮುಖ್ಯ ಕೊಳವೆ ಕಳೆದೊಂದು ತಿಂಗಳಿನಿಂದ ಸತತವಾಗಿ ಸೋರಿಕೆಯಾಗುತ್ತಿದ್ದು ನಿಮಿಷಕ್ಕೆ 10 ಲೀಟರ್ ನಷ್ಟು ನೀರು ವೃಥಾ ಪೋಲಾಗುತ್ತಿದೆ ಎಂದು ಅಲ್ಲಿನ ನಿವಾಸಿಗಳು ಹೇಳುತ್ತಾರೆ.
ಇಲ್ಲಿನ ನಿವಾಸಿ ಅಜಯ್ ಸಪ್ರಾ ಎಂಬುವವರು ಫೆಬ್ರವರಿ 15ರಂದು ನೀರು ಸೋರುವುದನ್ನು ಗಮನಿಸಿದ್ದಾರೆ. ಅದಕ್ಕಿಂತಲೂ ಮೊದಲೇ ನೀರು ಸೋರಲು ಪ್ರಾರಂಭವಾಗಿರಬಹುದು. ಫೆಬ್ರವರಿ 19ರಂದು ಅವರು ಬಿಡಬ್ಲ್ಯುಎಸ್ಎಸ್ ಬಿಗೆ ಮುಖ್ಯ ದೂರನ್ನು ಸಲ್ಲಿಸಿದರು. ಮತ್ತೊಂದು ದೂರನ್ನು ಫೆಬ್ರವರಿ 28ರಂದು ಸಲ್ಲಿಸಿದರು. ದೂರು ಸಲ್ಲಿಸಿ 12 ದಿನಗಳೇ ಕಳೆದರೂ ಇನ್ನೂ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುತ್ತಾರೆ ಅಜಯ್.
ನೀರು ಸೋರಿಕೆಯಾಗುತ್ತಿರುವುದು ಕೂಡ ಇದೇ ಮೊದಲ ಸಲವೇನಲ್ಲ.2010 ಜುಲೈಯಲ್ಲಿ, ಇದೇ ಪೈಪ್ ಲೈನ್ ನಲ್ಲಿ ನೀರು ಸೋರಿಕೆಯಾಗಿತ್ತು. ಬಿಡಬ್ಲ್ಯುಎಸ್ಎಸ್ ಬಿ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಲು ಆಗ ಮೂರು ವಾರ ತೆಗೆದುಕೊಂಡಿದ್ದರು. ಕಳೆದ ವರ್ಷ ಮಾರ್ಚ್ ನಲ್ಲಿ ಮತ್ತೊಮ್ಮೆ ನೀರು ಸೋರಿಕೆಯಾದಾಗ 10 ದಿನಗಳಲ್ಲಿಯೇ ಸರಿಪಡಿಸಿದ್ದರು ಎಂದು ಅಜಯ್ ಹೇಳುತ್ತಾರೆ. ಅವರು ಹಲಸೂರು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರಾಗಿದ್ದಾರೆ.
ಬೇಸಿಗೆ ಕಾಲದಲ್ಲಿ ಬೆಂಗಳೂರು ನಗರದಲ್ಲಿ ಕುಡಿಯುವ ನೀರಿನ ಕೊರತೆ ಎದುರಾಗುತ್ತದೆ. ಹೀಗಿರುವಾಗ ಇರುವ ನೀರನ್ನು ಪೋಲು ಮಾಡಿದರೆ ಮುಂದಿನ ತಿಂಗಳಲ್ಲಿ ಇನ್ನೂ ನೀರಿಗೆ ಕೊರತೆಯುಂಟಾಗುತ್ತದೆ ಎನ್ನುತ್ತಾರೆ ಹಲಸೂರು ಆರ್ ಡಬ್ಲ್ಯುಎ ನಿವಾಸಿ ವಿ.ಪುರುಷೋತ್ತಮ್.
ಈ ಬಗ್ಗೆ ಅಧಿಕಾರಿಗಳನ್ನು ಸಂರರ್ಕಿಸಿ ಪ್ರತಿಕ್ರಿಯೆ ಕೇಳಲು ಬಯಸಿದಾಗ ಅವರು ಸಂಪರ್ಕಕ್ಕೆ ಸಿಗಲಿಲ್ಲ.
ಅಧಿಕಾರಿಗಳ ಬೇಜವಾಬ್ದಾರಿಯಲ್ಲದೆ ಇದು ಬೇರೇನೂ ಅಲ್ಲ. ನೈಸರ್ಗಿಕ ಸಂಪನ್ಮೂಲಗಳನ್ನು ದುರುಪಯೋಗಪಡಿಸಿಕೊಳ್ಳಬಾರದು. ಮೊಬೈಲ್ ಫೋನ್ ಗಳ ಆಧುನಿಕ ತಂತ್ರಜ್ಞಾನದಿಂದ ಸಮಸ್ಯೆಗಳನ್ನು ನಿಮಿಷಗಳಲ್ಲಿ ಬಗೆಹರಿಸಲು ಸಾಧ್ಯವಿರುವಾಗ ಅಧಿಕಾರಿಗಳೇಕೆ ಉದಾಸೀನ ತೋರುತ್ತಾರೆ ಎಂದು ಕೇಳುತ್ತಾರೆ ಪರಿಸರ ತಜ್ಞ ಎ.ಎನ್.ಯಲ್ಲಪ್ಪ.