ಕಾನೂನು ಸಚಿವ ಟಿ.ಬಿ.ಜಯಚಂದ್ರ
ಬೆಂಗಳೂರು: ಕರ್ನಾಟಕ ಕೈಗಾರಿಕೆ ಪ್ರದೇಶಗಳ ಅಭಿವೃದ್ಧಿ ಮಂಡಳಿಯಿಂದ(ಕೆಐಎಡಿಬಿ) ಜಮೀನು ಪಡೆಯುವ ಉದ್ಯಮಿಗಳಿಗೆ ನಿಗದಿಯಾಗಿದ್ದ 99 ವರ್ಷ ಗುತ್ತಿಗೆ ಬದಲು 30 ವರ್ಷಗಳ ಗುತ್ತಿಗೆ ನಂತರ ಭೂ ಮಾಲಿಕತ್ವ ನೀಡಲು ಸರ್ಕಾರ ನಿರ್ಧರಿಸಿದೆ.
ಉದ್ಯಮಿಗಳು ತಾವೇ ಭೂಮಿ ಖರೀದಿಸಿ ದರ ನಿಗದಿ ಮಾಡಿ ಕೆಐಎಡಿಬಿ ಮಧ್ಯಸ್ಥಿಕೆಯಲ್ಲಿ ಹಂಚಿಕೆ ಮಾಡಿಸಿಕೊಂಡಿರುವ ಆಕ ಘಟಕ ಸಂಕೀರ್ಣಗಳನ್ನು ಹೊಂದಿದ್ದರೆ ಇದು ಅನ್ವಯಿಸುತ್ತದೆ. 2013ರ ಒಳಗಾಗಿ ಭೂಮಿ ಪಡೆದು ಬರೀ ಲೀಸ್ ನೀತಿಗೆ ಒಳಪಡುವವರಿಗೆ ಇದು ಅನ್ವಯವಾಗಲಿದ್ದು, ಈ ಬಗ್ಗೆ ಸದ್ಯ ಇರುವ ನೀತಿ ತಿದ್ದುಪಡಿ ಮಾಡಲು ಸಚಿವ ಸಂಪುಟದಲ್ಲಿ ನಿರ್ಧರಿಸಲಾಗಿದೆ ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ತಿಳಿಸಿದರು.
ಈ ಹೊಸ ನೀತಿ ಪ್ರಕಾರ ಇನ್ನು ಮುಂದೆ ಕೇಂದ್ರ, ರಾಜ್ಯ ಮತ್ತು ಸಾರ್ವಜನಿಕ ಉದ್ಯಮಗಳು, ಜಂಟಿ ಸಹಭಾಗಿತ್ವ ಸಂಸ್ಥೆಗಳು, ಏಕ ಘಟಕ ಸಂಕೀರ್ಣಗಳು, ವಸತಿ ಸಂಕೀರ್ಣಗಳಿಗೆ 99 ವರ್ಷಗಳ ಗುತ್ತಿಗೆ ರದ್ದುಗೊಳಿಸಿ ಗುತ್ತಿಗೆ ಮತ್ತು ಕ್ರಮ ವ್ಯವಸ್ಥೆ ಜಾರಿಗೊಳಿಸಲಾಗುವುದು ಎಂದರು.
ಜಲ ಸಂಪನ್ಮೂಲ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ: ಜಲ ಸಂಪನ್ಮೂಲ ಇಲಾಖೆಯಲ್ಲಿ ಖಾಲಿ ಇರುವ 1200 ಜ್ಯೂನಿಯರ್ ಎಂಜಿನಿಯರ್ ಮತ್ತು ಸಹಾಯಕ ಎಂಜಿನಿಯರ್ ಗಳ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆ ಆರಂಭಿಸಲಾಗುವುದು ಎಂದರು.
ಅಲ್ಲದೆ ಈ ವರ್ಷದಿಂದ ಆರ್ ಟಿಇಯಡಿ ಪ್ರವೇಶ ಪಡೆಯುವ ಪ್ರತಿ ವಿದ್ಯಾರ್ಥಿಯ ಶುಲ್ಕವನ್ನು 11,848 ರೂಪಾಯಿಯಿಂದ 16,000ಕ್ಕೆ ಹೆಚ್ಚಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ.