ರಾಜ್ಯ

ನಗರದಲ್ಲಿ ರೌಡಿಗಳ ಪುಂಡಾಟ: ಬಂಧಿಸಲು ಬಂದ ಪೊಲೀಸರ ಮೇಲೆಯೇ ಮಚ್ಚಿನಿಂದ ಹಲ್ಲೆ

Manjula VN
ಬೆಂಗಳೂರು: ನಗರ ವಾಸಿಗಳಿಗೆ ಭಾರೀ ತಲೆನೋವಾಗಿ ಪರಿಣಮಿಸಿದ್ದ ರೌಡಿಶೀಟರ್ ವೊಬ್ಬನಿಗೆ ರಾಜಗೋಪಾಲನಗರ ಠಾಣಾ ಪೊಲೀಸರು ಬಂದೂಕಿನ ಮುಖಾಂತರ ಬುಧವಾರ ಪಾಠ ಹೇಳಿದ್ದಾರೆ. 
ಪವನ್ (24) ರೌಡಿ ಶೀಟರ್ ಆಗಿದ್ದು. ಈತರ ವಿರುದ್ಧ ರಾಜಗೋಪಾಲ ನಗರದ ಠಾಣೆಯೊಂದರಲ್ಲಿಯೇ 12 ಪ್ರಕರಣಗಳು ದಾಖಲಾಗಿತ್ತು. ಹಲವು ವರ್ಷಗಳಿಂದಲೂ ಅಪರಾಧ ಚಟುವಟಿಕೆಯಲ್ಲಿ ಪವನ್ ನಿರತನಾಗಿದ್ದು, ಈತನ ಮೇಲೆ ಕೊಲೆ, ಕೊಲೆ ಯತ್ನ ಹಾಗೂ ದರೋಡೆ ಸೇರಿದಂತೆ ಹಲವು ಪ್ರಕರಣಗಳಿವೆ. 
ಬೆಳಿಗ್ಗೆ 3.20ರ ಸುಮಾರಿಗೆ ಹೊಂಡಾ ಆ್ಯಕ್ಟಿವಾದಲ್ಲಿ ವ್ಯಕ್ತಿಯೊಬ್ಬ ಹೋಗುತ್ತಿದ್ದು, ಆತ ಶಸ್ತ್ರಾಸ್ತ್ರಗಳನ್ನು ಇಟ್ಟುಕೊಂಡಿದ್ದಾನೆಂದು ಮಾಹಿತಿ ತಿಳಿದುಬಂದಿತ್ತು. ಅಲ್ಲದೆ, ವಾಹನದಲ್ಲಿ ನಂಬರ್ ಪ್ಲೇಟ್ ಕೂಡ ಇಲ್ಲ ಎಂಬ ಮಾಹಿತಿ ಬಂದಿತ್ತು. ಕೂಡಲೇ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿ, ಮೂರು ಪೊಲೀಸರ ತಂಡಗಳು ಸ್ಥಳಕ್ಕೆ ಹೋಗಿತ್ತು. 
5 ಗಂಟೆ ಸುಮಾರಿಗೆ ಚೌಡೇಶ್ವರಿ ನಗರ ಮುಖ್ಯರಸ್ತೆ ಬಳಿ ಪವನ್ ಸಿಕ್ಕಿಬಿದ್ದಿದ್ದ. ಸ್ಥಳದಲ್ಲಿ ಎಸ್ಐ ಶರತ್ ಇದ್ದರು. ಇದೇ ವೇಳೆ ಇನ್ಸ್ ಪೆಕ್ಟರ್ ಮಿಥುನ್ ಶಿಲ್ಪಿಯವರು ಕೂಡ ಸ್ಥಳಕ್ಕೆ ಬಂದಿದ್ದಾರೆ. ಈ ವೇಳೆ ಶರಣಾಗತಿಯಾಗುವಂತೆ ಪೊಲೀಸರು ಪವನ್ ಗೆ ಸೂಚಿಸಿದ್ದಾರೆ. ಕೂಡಲೇ ಪವನ್ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಅಲ್ಲದೆ, ತಪ್ಪಿಸಿಕೊಳ್ಳುವ ಯತ್ನದಲ್ಲಿ ಮಚ್ಚಿನಿಂದ ಎಸ್ಐ ಶರತ್ ಅವರ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಈ ವೇಳೆ ಇನ್ಸ್ ಪೆಕ್ಟರ್ ಮಿಥುನ್ ಅವರು ಮೂರು ಸುತ್ತಿನ ಗುಂಡು ಹಾರಿಸಿದ್ದಾರೆ. ಎರಡು ಗುಂಡುಗಳು ಗಾಳಿಯಲ್ಲಿ ಹಾರಿದ್ದರೆ, ಮೂರನೇ ಗುಂಡು ಪವನ್ ಬಲಗಾಲಿನ ತೊಡೆ ಭಾಗಕ್ಕೆ ನುಗ್ಗಿದೆ.
ಕೂಡಲೇ ಗಾಯಗೊಂಡಿದ್ದ ರೌಡಿ ಶೀಟರ್ ಪವನ್ ಹಾಗೂ ಎಸ್ಐ ಶರತ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.  ಇದೀಗ ಇಬ್ಬರ ಆರೋಗ್ಯದಲ್ಲೂ ಚೇತರಿಕೆ ಕಂಡು ಬಂದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. 
ರೌಡಿ ಶೀಟರ್ ವಿರುದ್ಧ ಕರ್ತವ್ಯ ನಿರತ ಪೊಲೀಸ್ ಅಧಿಕಾರಿ ಮೇಲೆ ಹಲ್ಲೆ ಪ್ರಕರಣವನ್ನು ದಾಖಲು ಮಾಡಿಕೊಳ್ಳಲಾಗಿದೆ. ಗಾಯದಿಂದ ಚೇತರಿಕೆಗೊಂಡ ನಂತರ ಆತನನ್ನು ವಿಚಾರಣೆಗೊಳಪಡಿಸಲಾಗುತ್ತದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ. 
SCROLL FOR NEXT