ಬೆಂಗಳೂರು: ನಿನ್ನೆ ತಾವು ಮಂಡಿಸಿರುವ 2017-18 ನೇ ಸಾಲಿನ ಬಜೆಟ್ ಅಭಿವೃದ್ಧಿ ಪೂರಕ ಆಯವ್ಯಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಸಮಾಜದ ಎಲ್ಲಾ ವರ್ಗಗಳ ಜನರಿಗೂ ಬಜೆಟ್ ನಲ್ಲಿ ಸಾಕಷ್ಟು ಸೌಲಭ್ಯ ಕಲ್ಪಿಸಿದ್ದಾರೆ. ಆದರೆ ರೈತ ಸಮುದಾಯ ಭಾರೀ ನಿರೀಕ್ಷೆ ಇಟ್ಟು ಕೊಂಡಿದ್ದ ಸಾಲಮನ್ನಾ ಮಾಡದಿರುವುದಕ್ಕೆ ರಾಜ್ಯಾದ್ಯಂತ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಸಿದ್ದರಾಮಯ್ಯ ಬಜೆಟ್ ಮಂಡನೆ ನಂತರ ನೀಡಿರುವ ಸಂದರ್ಶನದ ವಿವರ ಇಲ್ಲಿದೆ.
1. ಬಜೆಟ್ ಬಗ್ಗೆ ಏನು ಹೇಳುತ್ತಿರಿ?
ಇದೊಂದು ಅಭಿವೃದ್ಧಿ ಪೂರಕ ಬಜೆಟ್, ರೈತ ವರ್ಗ, ಗ್ರಾಮೀಣಾಭಿವೃದ್ದಿ ಮತ್ತು ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಸಮಾನವಾಗಿ ಅನುದಾನ ನೀಡಲಾಗಿದೆ ಎಂದು ಹೇಳಿದ್ದಾರೆ.
2.ಸಾಲಮನ್ನಾ ಮಾಡದಿರುವುದು ರೈತ ವರ್ಗದ ಅಸಮಾಧಾನಕ್ಕೆ ಕಾರಣವಾಗಿದೆಯಲ್ಲಾ?
ರೈತರ ಸಾಲಮನ್ನಾ ಮಾಡದಿರುವುದು ಸಹಜವಾಗಿಯೇ ಅವರಲ್ಲಿ ಬೇಸರ ಮೂಡಿಸಿದೆ, ಸಾಲಮನ್ನಾ ಮಾಡಲು ಆಗ್ರಿಹಿಸಿ ಬಿಜೆಪಿ ಪ್ರತಿಭಟನೆ ನಡೆಸುವ ಬೆದರಿಕೆ ಹಾಕುತ್ತಿದೆ. ಆದರೆ ರಾಜ್ಯ ಬಿಜೆಪಿ ನಾಯಕರು ರೈತರ ಸಾಲಮನ್ನಾ ಮಾಡುವಂತೆ ಏಕೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕುತ್ತಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ. ಕೇಂದ್ರ ಸರ್ಕಾರ ಶೇ. 50 ರಷ್ಟು ಸಾಲ ಮನ್ನಾ ಮಾಡಲಿ, ಸಹಕಾರ ಸಂಘಗಳಲ್ಲಿ ರೈತರು ಪಡೆದಿರುವ ಶೇ.50 ರಷ್ಟು ಸಾಲವನ್ನುಾ ರಾಜ್ಯ ಸರ್ಕಾರ ಮನ್ನಾ ಮಾಡುತ್ತದೆ ಎಂದು ಹೇಳಿದ್ದಾರೆ.
ಉತ್ತರ ಪ್ರದೇಶ ಚುನಾವಣೆ ಗಮನದಲ್ಲಿಟ್ಟುಕೊಂಡ ರೈತರ ಸಾಲಮನ್ನಾ ಮಾಡುವುದಾಗಿ ಘೋಷಿಸಿದ ಪ್ರಧಾನಿ ನರೇಂದ್ರ ಮೋದಿ ಸುಳ್ಳು ಆಶ್ವಾಸನೆ ನೀಡಿದ್ದಾರೆ. ಆದರೆ ಕರ್ನಾಟಕದ ರೈತರ ಸಾಲ ಮನ್ನಾ ಮಾಡಲು ಮಾತ್ರ ಮೋದಿ ಏಕೆ ಮನಸು ಮಾಡುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
3. ಮುಂಬರುವ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಯೋಜನೆಗಳಿಗೆ ಬಜೆಟ್ ನಲ್ಲಿ ಹೆಚ್ಚು ಅನುದಾನ ನೀಡಲಾಗಿದೆಯೇ?
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳು, ಮಹಿಳೆಯರು ಹಾಗೂ ಆರ್ಥಿವಾಗಿ ದುರ್ಬಲರಾಗಿರುವ ವರ್ಗಗಳಿಗೆ ಹೆಚ್ಚಿನ ಅನುದಾನ ನೀಡಿದ್ದೇವೆ. ಜೊತೆಗೆ ನೀರಾವರಿ, ಮೂಲಭೂತ ಸೌಲಭ್ಯಗಳ ಅಭಿವೃದ್ಧಿ, ಗ್ರಾಮೀಣಾಭಿವೃದ್ಧಿ, ಕೃಷಿ ಮತ್ತು ವಸತಿ ಕ್ಷೇತ್ರಗಳಿಗೂ ಕೂಡ ಬಜೆಟ್ ನಲ್ಲಿ ಹೆಚ್ಚು ಅನುದಾನ ನೀಡಿದ್ದೇವೆ ಎಂದು ತಿಳಿಸಿದ್ದಾರೆ.
4. ಸಾಲದ ಹೊರೆ ಹೆಚ್ಚುತ್ತಿದೆ ಎಂಬ ವಿರೋಧ ಪಕ್ಷಗಳ ಆರೋಪಕ್ಕೆ ನಿಮ್ಮ ಉತ್ತರ?
ಈ ಬಾರಿಯ ಬಜೆಟ್ ಗಾತ್ರ 1.86 ಲಕ್ಷ ಕೋಟಿ, ಕಳೆದ ವರ್ಷಕ್ಕಿಂತ ಶೇ. 14 ರಷ್ಟು ಜಾಸ್ತಿಯಾಗಿದೆ. ಒಟ್ಟಾರೆ 2.24 ಲಕ್ಷ ಕೋಟಿ ಸಾಲದ ಹೊರೆಯಿದೆ, 137 ಕೋಟಿ ರು.ಹೆಚ್ಚಿನ ಹೊರೆಯಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
5. ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮತ್ತು ನಿವೃತ್ತಿ ವಯಸ್ಸು 58 ರಿಂದ 60ಕ್ಕೆ ಏರಿಕೆ, ಇದನ್ನು ಹೇಗೆ ಅನುಷ್ಠಾನಗೊಳಿಸುವಿರಿ?
ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ನೌಕರಿ ಸಂಬಂಧ ಮಸೂದೆ ಜಾರಿಗೆ ತರಲು ಕಾರ್ಮಿಕ ಇಲಾಖೆ ಅಗತ್ಯವಿರುವ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ನಂತರದ ದಿನಗಳಲ್ಲಿ ಅದರ ಬಗ್ಗೆ ವಿವರ ನೀಡಲಾಗುವುದು ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics