ಮಂಗಳೂರು: ಖ್ಯಾತ ವಿಚಾರವಾದಿ ಪ್ರೊಫೆಸರ್ ನರೇಂದ್ರ ನಾಯಕ್ ಅವರ ಹತ್ಯೆಗೆ ಯತ್ನ ನಡೆಸಿರುವ ಘಟನೆ ಮಂಗಳೂರಿನ ಉರ್ವದಲ್ಲಿ ನಡೆದಿದೆ ಎಂದುತಿಳಿದುಬಂದಿದೆ.
ಈ ಬಗ್ಗೆ ಸ್ವತಃ ಪ್ರೊ.ನರೇಂದ್ರ ನಾಯಕ್ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ನಿನ್ನೆ "ಕಾರಿನಲ್ಲಿ ತೆರಳುತ್ತಿದ್ದ ವೇಳೆ ಇಬ್ಬರು ಬೈಕ್ ನಲ್ಲಿ ಹಿಂಬಾಲಿಸಿಕೊಂಡು ಬಂದಿದ್ದರು. ಸರ್..ಟೈರ್ ಪಂಚರ್ ಆಗಿದೆ ಎಂದು ಕಾರು ನಿಲ್ಲಿಸಲು ಪ್ರಯತ್ನಿಸಿದ್ದರು. ಅಪಾಯದ ಮುನ್ಸೂಚನೆ ಅರಿತ ನಾನು ಕಾರು ನಿಲ್ಲಿಸದೆ ಪ್ರಯಾಣಿಸಿದೆ ಎಂದು ಹೇಳಿದ್ದಾರೆ.
ಪ್ರೊ.ನರೇಂದ್ರ ನಾಯಕ್ ಅವರು ವಿನಾಯಕ ಬಾಳಿಗ ಹತ್ಯೆ ಪ್ರಕರಣ ಸಂಬಂಧ ನಡೆಯುತ್ತಿರುವ ಹೋರಾಟದ ಮುಂಚೂಣಿ ಹೋರಾಟಗಾರರಾಗಿದ್ದು, ಹೋರಾಟದಿಂದ ಹಿಂದೆ ಸರಿಯುವಂತೆ ಹಲವರು ಒತ್ತಡ ಹೇರಿದ್ದರು. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ನರೇಂದ್ರ ನಾಯಕ್ ಅವರಿಗೆ ಓರ್ವ ಗನ್ ಮ್ಯಾನ್ ಅನ್ನು ಪೊಲೀಸ್ ಇಲಾಖೆ ಒದಗಿಸಲಾಗಿತ್ತು. ಆದರೆ ನಿನ್ನೆ ಗನ್ ಮನ್ ಇಲ್ಲದೇ ನರೇಂದ್ರ ನಾಯಕ್ ಅವರು ಹೊರಗೆ ಬಂದಿದ್ದು, ಈ ವಿಚಾರ ತಿಳಿದ ದುಷ್ಕರ್ಮಿಗಳು ಅವರನ್ನು ಹಿಂಬಾಲಿಸಿಕೊಂಡು ಬಂದಿದ್ದಾರೆ.
ಈ ವೇಳೆ ಮಾರ್ಗ ಮಧ್ಯೆ ಟೈರ್ ಪಂಚರ್ ಆಗಿದೆ ಎಂದು ಸುಳ್ಳು ಹೇಳಿದ ದುಷ್ಕರ್ಮಿಗಳು ಅವರ ಕಾರು ನಿಲ್ಲಿಸಲು ಪ್ರಯತ್ನಿಸಿದ್ದಾರೆ. ಆದರೆ ಅಪಾಯ ಮುನ್ಸೂಚನೆ ಅರಿತ ನರೇಂದ್ರ ನಾಯಕ್ ಅವರು ಕಾರು ನಿಲ್ಲಿಸದೇ ಮುಂದೆ ಹೋಗಿ ಪೆಟ್ರೋಲ್ ಬಂಕ್ ನವರಿಂದ ಕಾರು ಚತ್ರ ಪಂಚರ್ ಆಗಿದೆಯೇ ಇಲ್ಲವೇ ಎಂಬುದನ್ನು ಪರೀಕ್ಷಿಸಿದ್ದಾರೆ. ಬಳಿಕ ದುಷ್ಕರ್ಮಿಗಳ ಸಂಚು ಬಯಲಾಗಿದ್ದು, ಇಂದು ನರೇಂದ್ರ ನಾಯಕ್ ಅವರು ಉರ್ವ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ನೀಡಿದ್ದಾರೆ.
ರಾಜ್ಯದಲ್ಲಿ ವಿಚಾರವಾದಿ ಎಂಎಂ ಕಲ್ಬುರ್ಗಿ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದ ಘಟನೆ ಇನ್ನೂ ಹಸಿರಾಗಿರುವಾಗಲೇ ಇದೀಗ ಮತ್ತೊಬ್ಬ ವಿಚಾರವಾದಿ ನರೇಂದ್ರ ನಾಯಕ್ ಅವರನ್ನು ದುಷ್ಕರ್ಮಿಗಳು ಗುರಿಯಾಗಿಸಿಕೊಂಡಿರುವ ಸಾಧ್ಯತೆ ಇದೆ. ಇನ್ನು ಕೆಲವೇ ದಿನಗಳಲ್ಲಿ ವಿನಾಯಕ್ ಬಾಳಿಗಾ ಹತ್ಯೆಗೆ ವರ್ಷ ತುಂಬಲಿದ್ದು, ಅಷ್ಟರೊಳಗೇ ತಮ್ಮ ಕೊಲೆಗೆ ಸಂಚು ರೂಪಿಸಿರಬಹುದು ಎಂದು ನರೇಂದ್ರ ನಾಯಕ್ ಶಂಕೆ ವ್ಯಕ್ತಪಡಿಸಿದ್ದಾರೆ.
ನರೇಶ್ ಶೆಣೈ ಗ್ಯಾಂಗ್ ಮೇಲೆ ಶಂಕೆ
ಇದೇ ವೇಳೆ ಪ್ರೊ. ನರೇಂದ್ರ ನಾಯಕ್ ಅವರ ಕೊಲೆ ಯತ್ನಕ್ಕೆ ಸಂಬಂಧಿಸಿದಂತೆ ನರೇಶ್ ಶೆಣೈ ಗ್ಯಾಂಗ್ ಮೇಲೆ ಅನುಮಾನ ವ್ಯಕ್ತಪಡಿಸಲಾಗುತ್ತಿದೆ. ವಿನಾಯಕ ಬಾಳಿಗ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ನರೇಶ್ ಶೆಣೈ ಪ್ರಸ್ತುತ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.