ರಾಜ್ಯ

ಅಸಂತುಷ್ಟ ಓಲಾ, ಉಬರ್ ಡ್ರೈವರ್ ಗಳ ನೆರವಿಗೆ 'ಹೆಚ್ ಡಿಕೆ ಕ್ಯಾಬ್ಸ್'; ಆಕರ್ಷಕ ಸೌಲಭ್ಯಗಳ ಭರವಸೆ

Srinivas Rao BV
ಬೆಂಗಳೂರು: ಓಲಾ, ಉಬರ್ ಕ್ಯಾಬ್ ಗಳಿಗೆ ಪೈಪೋಟಿ ನೀಡುವುದಕ್ಕಾಗಿ ಹೆಚ್ ಡಿಕೆ ಕ್ಯಾಬ್ಸ್ ಎಂಬ ಹೊಸ ಕ್ಯಾಬ್ ಸೇವೆಗಳ ಸಂಸ್ಥೆ ಶೀಘ್ರವೇ ಪ್ರಾರಂಭವಾಗಲಿದೆ. ಕ್ಯಾಬ್ ಚಾಲಕರಿಗೆ ಆಕರ್ಷಕ ಸೌಲಭ್ಯಗಳನ್ನು ಒದಗಿಸುವ ಮೂಲಕ ಓಲಾ, ಉಬರ್ ಕ್ಯಾಬ್ ಸಂಸ್ಥೆಗಳ ಅಸಂತುಷ್ಟ ಡ್ರೈವರ್ ಗಳನ್ನು ತನ್ನತ್ತ ಸೆಳೆಯಲು ಹೆಚ್ ಡಿಕೆ ಯೋಜನೆ ರೂಪಿಸಿರುವುದರ ಬಗ್ಗೆ ಡೆಕನ್ ಹೆರಾಲ್ಡ್ ವರದಿ ಪ್ರಕಟಿಸಿದೆ. 
ಉಬರ್, ಓಲಾ ಕ್ಯಾಬ್ ಗಳ ಚಾಲಕರ ಆದಾಯದಲ್ಲಿ ಕುಸಿತ ಉಂಟಾಗಿದ್ದು, ಲೋನ್ ನ್ನು ಮರುಪಾವತಿ ಮಾಡಲು ಸಾಧ್ಯವಾಗದ ಸ್ಥಿತಿಗೆ ಚಾಲಕರು ತಲುಪಿದ್ದಾರೆ. ಕ್ಯಾಬ್ ಸಂಸ್ಥೆಗಳು ಹಾಗೂ ಸರ್ಕಾರ ಚಾಲಕರ ಹಿತಾಸಕ್ತಿಯನ್ನು ಕಾಪಾಡುವಲ್ಲಿ ವಿಫಲವಾಗಿದೆ. ಆದ್ದರಿಂದ ಯುಗಾದಿ ವೇಳೆಗೆ ಹೊಸ ಆಪ್ ಆಧಾರಿತ ಕ್ಯಾಬ್ ಸೇವೆಗಳ ವೇದಿಕೆಯನ್ನು ಪ್ರಾರಂಭಿಸಿ ಚಾಲಕರಿಗೆ ಪರ್ಯಾಯವಾದ ವ್ಯವಸ್ಥೆಗೆ ಅವಕಾಶ ಮಾಡಿಕೊಡಲಾಗುವುದು ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿರುವುದನ್ನು ಡೆಕನ್ ಹೆರಾಲ್ಡ್ ವರದಿ ಮಾಡಿದೆ. 
ಹೊಸ ವ್ಯವಸ್ಥೆ ಓಲಾ ಹಾಗೂ ಉಬರ್ ಕ್ಯಾಬ್ ಗಳಿಗೆ ಪರ್ಯಾಯವಾಗಲಿದ್ದು, ಮಾ.20 ರಂದು ಸಾಫ್ಟ್ ವೇರ್ ಹಾಗೂ ಆಡಳಿತಾತ್ಮಕ ವಿಚಾರಗಳಿಗೆ ಸಂಬಂಧಿಸಿದಂತೆ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಕುಮಾರಸ್ವಾಮಿ ತಿಳಿಸಿದ್ದಾರೆ. ಹೊಸ ಕ್ಯಾಬ್ ವ್ಯವಸ್ಥೆಗೆ ಬೆಂಬಲಿಸಲು ಸುಮಾರು 13 ಚಾಲಕ ಸಂಘಟನೆಗಳು ಮುಂದಾಗಿದ್ದು, 35,000 ಚಾಲಕರ ಬೆಂಬಲವಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. 
ಇನ್ನು ಚಾಲಕ ಸಂಘಟನೆಯ ಮುಖಂಡ ತನ್ವೀರ್ ಪಾಷಾ ಸಹ ಈ ಬಗ್ಗೆ ಮಾತನಾಡಿದ್ದು, ಲಾಭ ಗಳಿಸುವ ಉದ್ದೇಶದಿಂದ ಹೊಸ ಸಂಸ್ಥೆಯನ್ನು ಪ್ರಾರಂಭಿಸಲಾಗುತ್ತಿಲ್ಲ. ಕೇವಲ ಸೇವೆಯ ದೃಷ್ಟಿಯಿಂದ ಪ್ರಾರಂಭಿಸಲಾಗುತ್ತಿದ್ದು, ಪ್ರತಿ ತಿಂಗಳ ಗಳಿಕೆಯ ಶೇ.6 ರಷ್ಟನ್ನು ಚಾಲಕರ ಕಲ್ಯಾಣ ನಿಧಿ ಸ್ಥಾಪಿಸಿ ಅದಕ್ಕೆ ನೀಡುವಂತೆ ಕುಮಾರಸ್ವಾಮಿ ಹೇಳಿದ್ದಾರೆ ಎಂದು ಪಾಷಾ ತಿಳಿಸಿದ್ದಾರೆ. 
SCROLL FOR NEXT