ಮಂಡ್ಯ: ವಿದ್ಯಾಭ್ಯಾಸಕ್ಕೆ ಹಣವಿಲ್ಲದೇ ಬ್ಯಾಂಕ್ ಸಾಲಕ್ಕಾಗಿ ಮೊರೆ ಹೋಗಿ ಸಾಲ ದೊರೆಯದ ಮುಸ್ಲಿಂ ಬಾಲಕಿಯೊಬ್ಬಳು ನೇರವಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಅಚ್ಚರಿಯ ಪ್ರತಿಕ್ರಿಯೆ ಪಡೆದಿದ್ದಾಳೆ.
ಮಂಡ್ಯ ಮೂಲದ ಸಾರಾ ಎಂಬ ವಿದ್ಯಾರ್ಥಿನಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಪ್ರಧಾನಿ ಮೋದಿ ನೆರವಿನಿಂದಾಗಿ ಇದೀಗ ತನ್ನ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿಕೊಳ್ಳುತ್ತಿದ್ದಾಳೆ. ಸಾರಾ ಮೂಲತಃ ಮಂಡ್ಯ ಮೂಲದ ಬಡ ಮುಸ್ಲಿಂ ಕುಟುಂಬದ ಮಗಳಾಗಿದ್ದು, ಅವರ ತಂದೆ ಮಂಡ್ಯ ಸಕ್ಕರೆ ಕಾರ್ಖಾನೆಯಲ್ಲಿ ಕೂಲಿ ಕಾರ್ಮಿಕರಾಗಿದ್ದಾರೆ. ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವ ಸಾರಾ, ಎಂಬಿಎ ಪದವಿ ವಿದ್ಯಾಭ್ಯಾಸ ಮಾಡುತ್ತಿದ್ದು, ಇದೀಗ ಆಕೆಯ ಪದವಿ ವಿದ್ಯಾಭ್ಯಾಸ ಪೂರ್ಣಗೊಳಿಸಲು ಆರ್ಥಿಕ ಮುಗ್ಗಟ್ಟು ಎದುರಾಗಿತ್ತು.
ಹೀಗಾಗಿ ಬ್ಯಾಂಕ್ ನಲ್ಲಿ ಸಾಲ ಪಡೆಯಲು ಸಾರಾ ಮುಂದಾಗಿದ್ದಳು. ಬ್ಯಾಂಕ್ ನಲ್ಲಿ ತನ್ನೆಲ್ಲಾ ಮಾರ್ಕ್ಸ್ ಕಾರ್ಡ್ ಗಳನ್ನು ಮತ್ತು ಇತರೆ ಅಗತ್ಯ ದಾಖಲೆಗಳೊಂದಿಗೆ ಸಾರಾ ಸೆಂಟ್ರಲ್ ಬ್ಯಾಂಕ್ ಇಂಡಿಯಾದಲ್ಲಿ ಸಾಲಕ್ಕಾಗಿ ಅರ್ಜಿ ಸಲ್ಲಿಸಿದ್ದಾಳೆ. ಆದರೆ ಸಾರಾಳ ಅರ್ಜಿ ಪರಿಶೀಲಿಸಿದ ಬ್ಯಾಂಕ್ ಅಧಿಕಾರಿಗಳು ಅರ್ಜಿ ತಿರಸ್ಕರಿಸಿದ್ದರು. ಅಂತೆಯೇ ಆಕೆಯ ಉತ್ತಮ ಅಂಕಗಳ ಹೊರತಾಗಿಯೂ ಸಾಲವನ್ನು ಹೇಗೆ ತೀರಿಸಲು ಸಾಧ್ಯವಾಗುತ್ತದೆ ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ್ದ ಸಾರಾ ನನ್ನ ತಂದೆ ಸಕ್ಕರೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ, ಅವರ ಸಂಬಳದಿಂದ ಸಾಲ ತೀರಿಸುತ್ತೇನೆ ಎಂದು ಹೇಳಿದ್ದಾಳೆ. ಆದರೆ ಇದಕ್ಕೆ ತೃಪ್ತರಾಗದ ಬ್ಯಾಂಕ್ ಅಧಿಕಾರಿಗಳು ಸಾಲ ನೀಡಲು ಸಾಧ್ಯವಿಲ್ಲ ಎಂದು ಹೇಳಿ ಕಳುಹಿಸಿದ್ದಾರೆ.
ಇದರಿಂದ ತೀವ್ರ ನೊಂದ ಸಾರಾ ಅಂತಿಮ ಮಾರ್ಗವಾಗಿ ತನ್ನೆಲ್ಲಾ ನೋವನ್ನು ಹೇಳಿಕೊಂಡು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ. ಅಚ್ಚರಿ ಎನ್ನುವ ರೀತಿಯಲ್ಲಿ ಸಾರಾ ಬರೆದ ಪತ್ರಕ್ಕೆ ಕೇವಲ 10 ದಿನಗಳಲ್ಲಿ ಪ್ರಧಾನಿ ಕಚೇರಿಯಿಂದ ಪ್ರತಿಕ್ರಿಯೆ ಬಂದಿದ್ದು, ವಿಜಯಾ ಬ್ಯಾಂಕ್ ನಿಂದ ಸಾಲ ಮಂಜೂರಾದ ಕುರಿತು ಪ್ರಧಾನಿ ಕಚೇರಿ ಸಾರಾಗೆ ಮಾಹಿತಿ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಈ ನೆರವಿಂದಾಗಿ ಅತ್ಯಂತ ಖುಷಿಯಾಗಿರುವ ಸಾರಾ ತನ್ನ ಖುಷಿಯನ್ನು ಸುದ್ದಿಸಂಸ್ಥೆಯೊಂದಿಗೆ ಹಂಚಿಕೊಂಡಿದ್ದಾಳೆ.
"ಪ್ರಧಾನಿ ನರೇಂದ್ರ ಮೋದಿ ನೆರವು ನೀಡುತ್ತಾರೆ ಎಂಬ ವಿಶ್ವಾಸವಿತ್ತು. ಆದರೆ ಕೇವಲ ಹತ್ತು ದಿನಗಳ ಒಳಗೇ ನನ್ನ ಪತ್ರಕ್ಕೆ ಸ್ಪಂದಿಸಿ ನನ್ನ ಸಮಸ್ಯೆ ದೂರ ಮಾಡಿದ್ದಾರೆ" ಎಂದು ಸಾರಾ ಹೇಳಿಕೊಂಡಿದ್ದಾಳೆ.