ರಾಜ್ಯ

ನಮಗೇ ಇಲ್ಲ, ತಮಿಳುನಾಡಿಗೆ ಬಿಡಲು ನೀರು ಎಲ್ಲಿದೆ? ಸುಪ್ರೀಂಕೋರ್ಟ್ ಆದೇಶಕ್ಕೆ ಸಿಎಂ ಪ್ರಶ್ನೆ

Shilpa D

ಬೆಂಗಳೂರು: ಜಲಾಶಯದಲ್ಲಿರುವ ನೀರು ಕುಡಿಯಲು ನಮಗೆ ಸಾಕಾಗುತ್ತಿಲ್ಲ, ಇನ್ನು ತಮಿಳುನಾಡಿಗೆ ಬಿಡಲು ಎಲ್ಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಬೆಂಗಳೂರು ಜಲಮಂಡಳಿ ವಿಶ್ವ ಜಲ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಜುಲೈ 11ರ ವರೆಗೆ ತಮಿಳುನಾಡಿಗೆ ಪ್ರತಿನಿತ್ಯ 2 ಸಾವಿರ ಕ್ಯೂಸೆಕ್ಸ್ ನೀರು ಬಿಡುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿದೆ, ಆದರೆ ಇಲ್ಲಿ ನಮಗೆ ಕುಡಿಯುವ ಉದ್ದೇಶಕ್ಕೆ ನೀರು ಸಾಕಾಗುತ್ತಿಲ್ಲ, ಇನ್ನು ನೀರು ಬಿಡಲು ಎಲ್ಲಿಂದ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

ಕೆಆರ್ ಎಸ್, ಕಬಿನಿ, ಹೇಮಾವತಿ ಮತ್ತು ಹಾರಂಗಿ ಜಲಾಶಯಗಳಲ್ಲಿ ಸಂಗ್ರಹವಾಗಿರುವ ನೀರು ಬೆಂಗಳೂರು ಮತ್ತು ಮೈಸೂರಿಗೆ ಕುಡಿಯುವ ಉದ್ದೇಶಕ್ಕೆ ಪೂರೈಕೆ ಮಾಡಲು ಮಾತ್ರ ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.

ನನ್ನನ್ನು ಸೇರಿದಂತೆ, ನಾವೆಲ್ಲರೂ ಶೇ. 80ರಷ್ಟು ನೀರನ್ನು ವ್ಯರ್ಥ ಮಾಡುತ್ತಿದ್ದೇವೆ. ನೀರನ್ನು ಪುನರ್ ಬಳಕೆ ಮಾಡಬಹುದು. ಹೀಗಾಗಿ ನೀರಿನ ಸಂರಕ್ಷಣೆ ಬಗ್ಗೆ ಎಲ್ಲರಿಗೂ ಜಾಗೃತಿ ಅವಶ್ಯಕವಾಗಿದೆ ಎಂದು ಸಿಎಂ ಹೇಳಿದ್ದಾರೆ.

ಪ್ರತಿದಿನ 1,300 ಲಕ್ಷ ಲೀಟರ್ ನೀರನ್ನು ಪುನರ್ಬಳಕೆ ಮಾಡಲು ಬೆಂಗಳೂರು ಜಲ ಮಂಡಳಿ ಚಿಂತಿಸುತ್ತಿದೆ. ಉಪಯೋಗಿಸಿದ ನೀರನ್ನು ಮತ್ತೆ ಬೇರೆ ಉದ್ದೇಶಗಳಿಗೆ ಬಳಕೆ ಮಾಡಿಕೊಳ್ಳಬಹುದಾಗಿದೆ.

ನೀರು ಸಂರಕ್ಷಣೆ ಬಗ್ಗೆ ಅರಿವು ಮೂಡಿಸಲು ಏರ್ಪಡಿಸಿದ್ದ 2 ಕಿಮೀ ಜಾಗೃತಿ ಜಾಥಾಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು.

SCROLL FOR NEXT