ಬೆಂಗಳೂರು: ಅಮೆರಿಕಾದ ವಾಷ್ಟಿಂಗ್ಟನ್, ನ್ಯೂಯಾರ್ಕ್ ನಗರಗಳಂತೆ ಐಟಿ ಸಿಟಿ ಬೆಂಗಳೂರಿನಲ್ಲೂ ಭೂಮಿಯ ಬೆಲೆ ಸರಿಸಮಾನವಾಗಿದೆ ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಹೇಳಿದ್ದಾರೆ.
ಕೇಂದ್ರದ ವಿವಿಧ ವಸತಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ನಂತರ ಮಾತನಾಡಿದ ಅವರು, ನಿನ್ನೆಯಿಂದ ಜಾರಿಯಾಗಿರುವ ರಿಯಲ್ ಎಸ್ಟೇಟ್ ಕಾಯ್ದೆ ಜನಪರವಾಗಿದೆ. ಬಣ್ಣ ಬಣ್ಣದ ದೊಡ್ಡ ದೊಡ್ಡ ಜಾಹೀರಾತುಗಳನ್ನು ನೀಡಿ ಜನರಿಗೆ ವಂಚಿಸುವ ಕಟ್ಟಡ ನಿರ್ಮಾಣ ಸಂಸ್ಥೆಗಳಿಗೆ ಈ ಕಾಯ್ದೆಯಿಂದ ಕಡಿವಾಣ ಬೀಳಲಿದೆ ಎಂದರು.
ಈ ರಿಯಲ್ ಎಸ್ಟೇಟ್ ಕಾಯ್ದೆ ಜಾರಿಯಿಂದ ಯಾರೂ ಆತಂಕಪಡುವ ಅಗತ್ಯವಿಲ್ಲ. ಕಟ್ಟಡ ನಿರ್ಮಾಣ ಸಂಸ್ಥೆಗಳು ಯಾವ ಸೌಲಭ್ಯವನ್ನು ಕೊಡುವುದಾಗಿ ಹೇಳುತ್ತವೋ ಅವನ್ನ ಗ್ರಾಹಕನಿಗೆ ನೀಡಲೇಬೇಕು. ಸೌಲಭ್ಯ ನೀಡದಿದ್ದರೆ ಅಂತಹ ಕಟ್ಟಡ ನಿರ್ಮಾಣ ಸಂಸ್ಥೆಗಳ ವಿರುದ್ಧ ಕಾಯ್ದೆ ಪ್ರಕಾರ ಕ್ರಮ ಆಗಲಿದೆ ಎಂದರು.
ರಿಯಲ್ ಎಸ್ಟೇಟ್ ಕಾಯ್ದೆಯನ್ನು ಈಗಾಗಲೇ 14 ರಾಜ್ಯಗಳು ಜಾರಿ ಮಾಡಿವೆ. ರಾಜ್ಯದಲ್ಲೂ 15 ದಿನಗಳಲ್ಲಿ ಈ ಕಾಯ್ದೆ ಜಾರಿ ಮಾಡುವ ಭರವಸೆ ಸರ್ಕಾರದಿಂದ ಸಿಕ್ಕಿದೆ.
ಬೆಂಗಳೂರು ಮುಂದಿನ ಹಂತದಲ್ಲಿ ಸ್ಮಾರ್ಟ್ ಸಿಟಿ ಆಗುವ ಸಾಧ್ಯತೆ ಇದೆ ಎಂದ ಅವರು, ಈಗಾಗಲೇ ರಾಜ್ಯದ ತುಮಕೂರು, ದಾವಣಗೆರೆ, ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಮಂಗಳೂರು, ಶಿವಮೊಗ್ಗ ಈ 6 ನಗರಗಳು ಸ್ಮಾರ್ಟ್ ಸಿಟಿ ಯೋಜನೆಯಲ್ಲಿವೆ. ಈ ನಗರಗಳ ಅಭಿವೃದ್ಧಿಗೆ 2ನೇ ಹಂತದಲ್ಲಿ 428 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದರು.
ಅದೇ ರೀತಿ ಅಮೃತ್ ಯೋಜನೆಯಡಿ 191 ಕೋಟಿ, ಸ್ವಚ್ಛ ಭಾರತ್‌ಗಾಗಿ 37 ಕೋಟಿ ರೂ., ಪ್ರಧಾನಮಂತ್ರಿ ಆವಾಜ್ ಯೋಜನೆಯಡಿ ವಿವಿಧ ವಸತಿ ಯೋಜನೆಗಳಿಗೆ 58.3 ಕೋಟಿ ರೂ.ಗಳ ಚೆಕ್‌ನ್ನು ರಾಜ್ಯ ಸರ್ಕಾರಕ್ಕೆ ಹಸ್ತಾಂತರಿಸಿದರು.