ಬೆಂಗಳೂರು: ವಿಧಾನಸೌಧದಲ್ಲಿ ಹಾಕಲಾಗಿರುವ ಮಹಾತ್ಮಾ ಗಾಂಧಿ, ನೋಬೆಲ್ ಪ್ರಶಸ್ತಿ ಪುರಸ್ಕೃತ ರವೀಂದ್ರನಾಥ್ ಠಾಗೂರ್ ಅವರ ಚಿತ್ರಗಳು ಕಳೆಗುಂದಿದ್ದು, ಮರು ಜೀವ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಸ್ಪೀಕರ್ ಕಚೇರಿಯಲ್ಲಿರುವ, ಸಚಿವರ ಕ್ಯಾಬಿನ್ ಗಳಲ್ಲಿ ಹಾಕಲಾಗಿರುವ ಗಣ್ಯ ವ್ಯಕ್ತಿಗಳ ಚಿತ್ರಗಳನ್ನು ಸರಿಯಾಗಿ ನಿರ್ವಹಣೆ ಮಾಡದೇ ಕಳೆಗುಂದಿವೆ. ಈ ಹಿನ್ನೆಲೆಯಲ್ಲಿ ಭಾರತೀಯ ರಾಷ್ಟ್ರೀಯ ಕಲಾ ಮತ್ತು ಸಾಂಸ್ಕೃತಿಕ ಪರಂಪರೆಯ ಟ್ರಸ್ಟ್(ಐಎನ್ ಟಿಎಸಿಹೆಚ್) ನ ಸಹಾಯ ಪಡೆದು ಕಳೆಗುಂದಿರುವ ಪುರಾತನ ಚಿತ್ರಗಳಿಗೆ 5 ಲಕ್ಷ ರೂ ವೆಚ್ಚದಲ್ಲಿ ಮತ್ತೆ ಜೀವ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ವಿಧಾನಸಭೆಯ ಮೊದಲ ಮಹಡಿಯಲ್ಲಿ ರವೀಂದ್ರನಾಥ್ ಠಾಗೂರ್ ಅವರ ಫೋಟೋ ಇದ್ದು, ಬಾಂಕ್ವೆಟ್ ಹಾಲ್ ನಲ್ಲಿ ಮೈಸೂರು ಸಂಸ್ಥಾನದ ದಿವಾನರಾಗಿದ್ದ ಸರ್ ಎಂ ವಿಶ್ವೇಶ್ವರಯ್ಯ, ಕೃಷ್ಣಮೂರ್ತಿ, ರಂಗಾಚಾರ್ಲು ಹಾಗೂ ಇನ್ನಿತರ ಗಣ್ಯರ ಚಿತ್ರಗಳನ್ನು ಹಾಕಲಾಗಿದೆ. ಗಣ್ಯರ ಚಿತ್ರಗಳೊಂದಿಗೆ ಕೆಆರ್ ಎಸ್ ಗಾರ್ಡನ್, ಶಿವನ ಸಮುದ್ರ ಜಲಪಾತ, ಚಾಮುಂಡೇಶ್ವರಿ ದೇವಾಲಯ ಸೇರಿದಂತೆ ಇನ್ನಿತರ ಐತಿಹಾಸಿಕ ಸ್ಥಳಗಳ ಚಿತ್ರಗಳನ್ನೂ ಹಾಕಲಾಗಿದ್ದು, ದಶಕಗಳ ಕಳಪೆ ನಿರ್ವಹಣೆಯಿಂದ ಈ ಚಿತ್ರಗಳೆಲ್ಲವೂ ಕಳೆಗುಂದಿದೆ ಎಂದು ವಿಧಾನಸಭೆಯ ಅಧಿಕರಿಯೊಬ್ಬರು ತಿಳಿಸಿದ್ದಾರೆ.
ಪುರಾತನ ಬೆಲೆಬಾಳುವ ಚಿತ್ರಗಳಲ್ಲಿ ಮತ್ತೆ ಜೀವಕಳೆ ಮೂಡುವಂತೆ ಮಾಡುವುದಕ್ಕೆ ಕ್ರಮ ಕೈಗೊಳ್ಳುವುದರ ಬಗ್ಗೆ ಮೇ.4 ರಂದು ಸಮಿತಿ ಸಭೆ ನಡೆದಿದ್ದು, ಐಎನ್ ಟಿಎಸಿಹೆಚ್ ನ ಸಹಯೋಗದಲ್ಲಿ ಕಾಮಗಾರಿ ನಡೆಸಲು ಒಪ್ಪಿಗೆ ಸೂಚಿಸಲಾಗಿದೆ.