ಸಿನಿಮೀಯ ರೀತಿಯಲ್ಲಿ ಪತಿಗೆ ಗುಂಡಿಕ್ಕಿದ ಪತ್ನಿ!
ಬೆಂಗಳೂರು: ಕುಡಿದ ಅಮಲಿನಲ್ಲಿ ಆರಂಭವಾದ ದಂಪತಿಗಳ ನಡುವಿನ ಜಗಳ ವಿಕೋಪಕ್ಕೆ ಹೋಗಿ ಶೂಟೌಟ್ ನಲ್ಲಿ ಅಂತ್ಯವಾಗಿದೆ.
ಬಿಎಂಟಿಸಿ ಬಸ್ಸಿನಲ್ಲಿ ಹೋಗುತ್ತಿದ್ದ ಪತಿಯನ್ನು ಕಾರಿನಲ್ಲಿ ಬೆನ್ನು ಹತ್ತಿದ್ದ ಪತ್ನಿ ಸಿನಿಮೀಯ ರೀತಿಯಲ್ಲಿ ಪ್ರಯಾಣಿಕರ ಎದುರೇ ಗುಂಡು ಹಾರಿಸಿರುವ ಘಟನೆಯೊಂದು ಹೊಸೂರು ಮುಖ್ಯರಸ್ತೆಯಲ್ಲಿರುವ ಹುಸ್ಕೂರು ಗೇಟ್ ಬಳಿ ಶುಕ್ರವಾರ ಸಂಜೆ ನಡೆದಿದೆ.
ಹಂಸವೇಣೆ (38) ಗುಂಡು ಹಾರಿಸಿದ ಪತ್ನಿಯಾಗಿದ್ದು, ಸಾಯಿರಾಮ್ (44) ಗಾಯಗೊಂಡಿರುವ ಪತಿಯಾಗಿದ್ದಾರೆ. ಪ್ರಸ್ತುತ ಸಾಯಿರಾಮ್ ಅವರು ಅನೇಕಲ್ ಸ್ಪರ್ಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸಾಯಿರಾಮ್ ಅವರ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಪ್ರಕರಣ ಸಂಬಂಧ ಆರೋಪಿ ಹಂಸವೇಣೆಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸೂರ್ಯ ಸಿಟಿ ಪೊಲೀಸರು ಬಂಧನಕ್ಕೊಳಪಡಿಸಿ ವಿಚಾರಣೆಗೊಳಪಡಿಸಿದ್ದಾರೆ.
ದಂಪತಿಗಳು ಹೆಚ್ಎಸ್ಆರ್ ಲೇಔಟ್'ನ ಹರಳೂರಿನಲ್ಲಿರುವ ರಾಯಲ್ ಪ್ಯಾರಡೈಸ್ ಆಪಾರ್ಟ್ ಮೆಂಟ್ ನಿವಾಸಲಿಗಳಾಗಿದ್ದು, ಏಸ್ ಫೆಸಲಿಟಿಸ್ ಮ್ಯಾನೇಜ್ ಮೆಂಟ್ ಆ್ಯಂಡ್ ಪ್ರಾಪರ್ಟಿಸ್ ಎಂಬ ಕಂಪನಿಯಲ್ಲಿದ್ದಾರೆ.
ನಿನ್ನೆ ಮಧ್ಯಾಹ್ನ ದಂಪತಿಗಳಿಬ್ಬರೂ ಚಂದಾಪುರ ಬಳಿಯ ಯಡವನಹಳ್ಳಿ ಸಮೀಪವಿರುವ ಮ್ಯಾಕ್ಸ್ ಹೋಟೆಲ್ ಗೆ ಊಟಕ್ಕೆ ತೆರಳಿ ಮದ್ಯ ಸೇವಿಸಿದ್ದಾರೆ. ಈ ಸಂದರ್ಭದಲ್ಲಿ ಮಗಳು ಮದುವೆ ವಿಚಾರ ಕುರಿತಂತೆ ಇಬ್ಬರ ನಡುವೆ ಹೋಟೆಲ್ ನಲ್ಲಿಯೇ ಜಗಳ ಆರಂಭವಾಗಿದೆ. ನಂತರ ಹೋಟೆಲ್ ನ ಸಿಬ್ಬಂದಿ ಇಬ್ಬರ ಜಗಳ ಬಿಡಿಸಿ ಕಳುಹಿಸಿದ್ದರು. ಊಟ ಮಾಡಿದ ನಂತರ ದಂಪತಿ ಫಾರ್ಚೂನರ್ ಕಾರಿನಲ್ಲಿ ಮನೆಗೆ ಹೊರಟಿದ್ದರು. ಮಾರ್ಗ ಮಧ್ಯೆ ಕೂಡ ಇಬ್ಬರ ನಡುವೆ ಜಗಳ ಮುಂದುವರೆದಿದೆ.
ಕೋಪದಲ್ಲಿ ಸಾಯಿರಾಮ್ ಅವರು ಪತ್ನಿಗೆ ಹೊಡೆದು ಹೆಬ್ಬಗೋಡಿಯಲ್ಲಿರುವ ವೀರಸಂದ್ರದ ಬಳಿ ಕಾರು ಇಳಿದು ಬಿಎಂಟಿಸಿ ಬಸ್ ಹತ್ತಿದ್ದಾರೆ. ಪತಿಯ ಹಲ್ಲೆಯಿಂದ ತೀವ್ರವಾಗಿ ಕೆಂಡಾಮಂಡಲವಾಗಿದ್ದ ಹಂಸವೇಣಿ ಕಾರಿನಲ್ಲಿ ಬಸ್ ನ್ನು ಹಿಂಬಾಲಿಸಿ ಹುಸ್ಕೂರ್ ಗೇಟ್ ಬಳಿ ಬಸ್ಸಿಗೆ ಕಾರನ್ನು ಅಡ್ಡವಾಗಿ ನಿಲ್ಲಿಸಿ ಬಸ್ ಹತ್ತಿ ಹತಿಯ ಹೊಟ್ಟೆ ಭಾಗಕ್ಕೆ ಮೂರು ಸುತ್ತು ಗುಂಡು ಹಾರಿಸಿದ್ದಾಳೆ.
ಈ ವೇಳೆ ಸಾಯಿರಾಮ್ ಅವರ ಸಹಾಯಕ್ಕೆ ಬಸ್ ಪ್ರಯಾಣಿಕರು ಮುಂದಾದಾಗ ಪಿಸ್ತೂಲ್ ತೋರಿಸಿ ಬೆದರಿಸಿದ್ದಾಳೆ. ಸ್ಥಳಕ್ಕೆ ಬಂದ ಪೊಲೀಸರು ಹಂಸವೇಣಿಯನ್ನು ಬಂಧಿಸಿ, ಆಕೆಯ ಕೈಯಲ್ಲಿದ್ದ ಪಿಸ್ತೂಲ್ ನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ವಿಚಾರಣೆ ವೇಳೆ ಹಂಸವೇಣಿ ಮತ್ತಿನಲ್ಲಿದ್ದರು. ಮಾಹಿತಿಗಳನ್ನು ಸರಿಯಾಗಿ ನೀಡಿಲ್ಲ. ಗಾಯಗೊಂಡು ಕೆಳಗೆ ಬಿದ್ದಿದ್ದ ಸಾಯಿರಾಮ್ ಅವರನ್ನು ಆ್ಯಂಬುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನಿಸಲೂ ಆಕೆ ಬಿಡಲಿಲ್ಲ. ನಂತರ ಪೊಲೀಸರು ಮತ್ತು ಸ್ಥಳೀಯ ಸಹಾಯದೊಂದಿಗೆ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಪೊಲೀಸರು ಹೇಳಿದ್ದಾರೆ.