ಮಹಿಳೆಯ ಶವ ಮುಚ್ಕಿಟ್ಟಿದ್ದ ಕಬೋರ್ಡ್
ಬೆಂಗಳೂರು: ಕೆಂಗೇರಿ ಉಪನಗರದ ಗಾಂಧಿನಗರದಲ್ಲಿ ಮನೆಯ ಕಪಾಟಿನಲ್ಲಿ ಮಹಿಳೆ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮನೆಯಲ್ಲಿ ಬಾಡಿಗೆಗಿದ್ದ ಕುಟುಂಬ ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ ಪ್ರಕರಣ ನಿಗೂಢವಾಗಿದೆ.
ನವೀನ್ ಮಾಲೀಕತ್ವದ ಕಟ್ಟಡದ ತಳಮಹಡಿಯಲ್ಲಿ 2016 ಮೇ ತಿಂಗಳಿಂದ ಶಿವಮೊಗ್ಗ ಮೂಲದ ಸಂಜಯ್ ಮತ್ತು ಈತನ ತಾಯಿ ಶಶಿಕಲಾ ಹಾಗೂ ಅಜ್ಜಿ ಬಾಡಿಗೆಗಿದ್ದರು. ಖಾಸಗಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ಸಂಜಯ್ ಇಂದಿರಾನಗರದಲ್ಲಿ ಅರೆಕಾಲಿಕ ಉದ್ಯೋಗ ಮತ್ತು ರಿಯಲ್ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದ.
ಫೆ.2ರಿಂದ ಬಾಡಿಗೆದಾರರು ಹೊರಗೆ ಹೋದವರು ವಾಪಸ್ ಬಂದಿಲ್ಲ. ಬಾಡಿಗೆ ಕರಾರು ಪತ್ರ ಅವಧಿ ಮುಗಿದಿತ್ತು. ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಅನುಮಾನ ಬಂದು ಭಾನುವಾರ (ಮೇ 7) ನವೀನ್ ತನ್ನ ಬಳಿಯಿದ್ದ ಕೀ ಬಳಸಿ ಬಾಗಿಲು ತೆಗೆದಾಗ ಪ್ರಕರಣ ಬೆಳಕಿಗೆ ಬಂದಿದೆ.
ನವೀನ್ ಮನೆ ಪ್ರವೇಶಿಸಿದಾಗ ಕಪಾಟಿನ ಬಾಗಿಲು ಮುಚ್ಚಿ ಸಿಮೆಂಟ್ ಬಳಿದು ಕೆಂಪುಬಣ್ಣ ಹಚ್ಚಿರುವುದು ಕಂಡು ಬಂದಿದೆ. ಮುಂದೆ 2 ಪ್ಲಾಸ್ಟಿಕ್ ಡ್ರಮ್ ಗಳನ್ನು ಇಟ್ಟು ಟೇಪ್ನಿಂದ ಸುತ್ತಲಾಗಿತ್ತು. ದುರ್ವಾಸನೆ ಬರುತ್ತಿತ್ತು. ಭಯಗೊಂಡ ನವೀನ್ ತಕ್ಷಣ ಕೆಂಗೇರಿ ಪೊಲೀಸರಿಗೆ ವಿಷಯ ತಿಳಿಸಿದರು.
ಮನೆಗೆ ಭೇಟಿ ನೀಡಿದ ಪೊಲೀಸ್ ತಂಡ ಡ್ರಮ್ ಗೆ ಸುತ್ತಿದ್ದ ಟೇಪ್ಗಳನ್ನು ತೆಗೆದಾಗ ಒಂದರಲ್ಲಿ ಬಟ್ಟೆ ಮತ್ತೊಂದರಲ್ಲಿ ಕೆಂಪು ಮಣ್ಣು ಪತ್ತೆಯಾಗಿದೆ. ಕಪಾಟಿನ ಬಾಗಿಲು ಒಡೆದಾಗ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕಪಾಟಿನ ಒಳಗೆ ಗೋಡೆ ಕೊರೆದು ಒಳಗೆ ಶವ ಇಡಲಾಗಿತ್ತು. ವಾಸನೆ ಬಾರದಂತೆ ಕಪಾಟಿಗೆ ಸಿಮೆಂಟ್ ಲೇಪಿಸಲಾಗಿತ್ತು. ರಕ್ತದ ಕಲೆ ಕಾಣದಂತೆ ಕೆಂಪು ಪೇಂಟ್ ಬಳಿದಿದ್ದಾರೆ. ಶವ ಕೊಳೆತಿರುವ ಹಿನ್ನೆಲೆಯಲ್ಲಿ ಗುರುತು ಪತ್ತೆ ಅಸಾಧ್ಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.
2016ರ ಮೇನಲ್ಲಿ ಸಂಜಯ್ ಕುಟುಂಬ ಬಾಡಿಗೆಗೆ ಬಂದಿತ್ತು. ಆಗಸ್ಟ್ನಲ್ಲಿ ಅಜ್ಜಿ (ಶಶಿಕಲಾ ತಾಯಿ) ಬಿದ್ದು ಕಾಲಿಗೆ ಗಾಯವಾಗಿತ್ತು. ನಂತರ ಅಜ್ಜಿ ದಿಢೀರ್ ನಾಪತ್ತೆಯಾಗಿದ್ದರು. ಮನೆ ಮಾಲೀಕ ಮತ್ತು ಅಕ್ಕಪಕ್ಕದ ಮನೆಯವರು ಕೇಳಿದಾಗ ಅಜ್ಜಿಯನ್ನು ಶಿವಮೊಗ್ಗಕ್ಕೆ ಬಿಟ್ಟು ಬಂದಿರುವುದಾಗಿ ತಾಯಿ-ಮಗ ಹೇಳಿದ್ದರು.