ಬೆಂಗಳೂರು: ಬೆಂಗಳೂರಿನ ಕೆರೆಗಳು ಒಂದೊಂದೇ ಕಲುಶಿತಗೊಳ್ಳುತ್ತಿದ್ದು, ಈಗ ಮೆಟ್ರೋ ರೈಲ್ ಕಾರ್ಪ್ ಸಹ ಕೆರೆಯನ್ನು ನಾಶ ಮಾಡುವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಉತ್ತರಹಳ್ಳಿಯ ಮುಖ್ಯ ರಸ್ತೆಯ ಬಳಿ ಇರುವ ಮಾಯಸಂದ್ರ ಕೆರೆಗೆ ಮೆಟ್ರೋ ರೈಲ್ ಕಾರ್ಪ್ ಕಾಂಕ್ರೀಟ್ ತ್ಯಾಜ್ಯವನ್ನು ಸುರಿಯುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಕೆರೆಯ ಬಳಿ ಹಾಗೂ ಬಫರ್ ಜೋನ್ ಗಳ ಬಳಿ ಒಣ ಅಥವಾ ಹಸಿ ತ್ಯಾಜ್ಯ ಸುರಿಯುವವರಿಗೆ 5 ಲಕ್ಷ ದಂಡ ವಿಧಿಸುವುದಾಗಿ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರ (ಕೆಎಲ್ ಸಿಡಿಎ) ಎಚ್ಚರಿಕೆ ನೀಡಿದ್ದರೂ ಸಹ ಮಾಯಸಂದ್ರ ಕೆರೆಯ ಬಳಿ ಕಾಂಕ್ರೀಟ್ ತ್ಯಾಜ್ಯವನ್ನು ಸುರಿಯಲಾಗುತ್ತಿದೆ.
ಮನೀಷ್ ವಿ ಪ್ರಸಾದ್ ಎಂಬ ಇಂಜಿನಿಯರಿಂಗ್ ವಿದ್ಯಾರ್ಥಿ ಕಾಂಕ್ರೀಟ್ ತ್ಯಾಜ್ಯ ಸುರಿಯುತ್ತಿರುವುದನ್ನು ಗಮನಿಸಿದ್ದಾರೆ. " ಎರಡು ವಾರಗಳ ಹಿಂದೆ ಮಾಯಸಂದ್ರ ಕೆರೆ-1 ರಲ್ಲಿ ಮೆಟ್ರೋ ಫೇಸ್-II ರ ಕಾಮಗಾರಿಯ ಕಾಂಕ್ರೀಟ್ ತ್ಯಾಜ್ಯವನ್ನು ಸುರಿಯುತ್ತಿರುವುದನ್ನು ಗಮನಿಸಿದ್ದೆ. ಬಿಲ್ಡರ್ ಗಳು ಕಳೆದ ಎರಡು ತಿಂಗಳಿನಿಂದ ಈ ರೀತಿ ಕಾಂಕ್ರೀಟ್ ತ್ಯಾಜ್ಯವನ್ನು ಸುರಿಯುತ್ತಿದ್ದಾರೆ. ಈ ಬಗ್ಗೆ ದೂರು ನೀಡಿದ್ದೇನೆ ಎಂದು ಹೇಳಿದ್ದಾರೆ.
ಕೆಂಗೇರಿಯಲ್ಲಿರುವ ಮಾಯಸಂದ್ರ ಕೆರೆ -1 ಹಾಗೂ ಕೆರೆ-2 ನ್ನು ಅರಣ್ಯ ಇಲಾಖೆ ನಿರ್ವಹಣೆ ಮಾಡುತ್ತಿದ್ದು, ಈಗ ಕಾಂಕ್ರೀಟ್ ತ್ಯಾಜ್ಯ ಸುರಿಯಲಾಗುತ್ತಿರುವ ಕೆರೆ-1 ಸಂಪೂರ್ಣ ಒಣಗಿಹೋಗಿದೆ. ಈ ಬಗ್ಗೆ ಕೆಎಲ್ ಸಿಡಿಎ ಸಿಇಒ ವಿದ್ಯಾಸಾಗರ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿದ್ದು, ಬೆಂಗಳೂರು ನಗರ ವಿಭಾಗದ ಡಿಸಿಎಫ್ ಗೆ ಕ್ರಮ ಕೈಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.