ತಾಯಿ ಶಾಂತಮ್ಮನೊಂದಿಗೆ ಶರಣಮ್ಮ
ಕೊಪ್ಪಳ: ಕೊಪ್ಪಳದ ಕೃಷಿಕ ದಂಪತಿಯ ಮಗಳಾಗಿರುವ ಶರಣಮ್ಮ ಕರಿ, ಹಲವು ಪ್ರಯತ್ನದ ನಂತರ ತನ್ನ ತಾಯಿಯ ಆಸೆಯಂತೆ ತಹಶೀಲ್ದಾರ್ ಹುದ್ದೆ ದೊರಕಿಸಿಕೊಂಡಿದ್ದಾರೆ.
ಕೊಪ್ಪಳದ ಕುಷ್ಠಗಿ ತಾಲೂಕಿನ ಮಂಡಲ್ ಗ್ರಾಮದ ಶಾಂತಮ್ಮ ಹಾಗೂ ತಂದೆ ದ್ಯಾಮಣ್ಣರಿಗೆ ಶರಣಮ್ಮ ಸೇರಿ ನಾಲ್ಕು ಮಕ್ಕಳು, ಈ ದಂಪತಿಗೆ ಸೇರಿದ ಕೃಷಿ ಭೂಮಿ ವಿವಾದದಲ್ಲಿ ಸಿಲುಕಿದೆ. ವಿವಾದದಲ್ಲಿ ಸಿಲುಕಿರುವ ಬಡ ರೈತರ ಕೃಷಿ ಭೂಮಿಯನ್ನು ವಾಪಸ್ ಅವರಿಗೆ ದೊರಕಿಸಿಕೊಡುವ ನಿಟ್ಟಿನಲ್ಲಿ ತಮ್ಮ ಮಗಳು ತಹಶೀಲ್ದಾರ್ ಆಗಬೇಕೆಂದು ಶಾಂತಮ್ಮ ಬಯಸಿದರು. ಈ ನಿಟ್ಟಿನಲ್ಲಿ ಶರಣಮ್ಮ ಛಲ ಬಿಡದ ತ್ರಿವಿಕ್ರಮನಂತೆ ಹಲವು ಸ್ಪರ್ದಾತ್ಮಕ ಪರೀಕ್ಷೆಗಳನ್ನು ಬರೆದು ಕೊನೆಗೂ ತಾಯಿಯ ಆಸೆ ಈಡೇರಿಸಿದ್ದಾರೆ.
2010 ರಲ್ಲಿ ತನ್ನ ತಾಯಿ ಆಡಿದ ಮಾತುಗಳು ನನ್ನ ಮೇಲೆ ಅಪಾರ ಪ್ರಭಾವ ಬೀರಿತು. 2014ರ ಕೆಪಿಎಸ್ಸಿ ಪರೀಕ್ಷೆಯಲ್ಲಿ ಶರಣಮ್ಮ 16ನೇ ರ್ಯಾಂಕ್ ಪಡೆದು ಗೆಜೆಟೆಡ್ ಪ್ರೊಬೆಷನರಿ ಪೋಸ್ಟ್ ಗೆ ಆಯ್ಕೆಯಾಗಿದ್ದಾರೆ.
ಯಶಸ್ಸು ಶರಣಮ್ಮ ಅವರಿಗೆ ಕೇವಲ ಒಂದೇ ಬಾರಿ ದೊರಕಲಿಲ್ಲ, ಹಲವು ಏರಿಳಿತಗಳ ನಂತರ ಅವರು ತಹಶೀಲ್ದಾರ್ ಆಗಿದ್ದಾರೆ. ಬಾಗಲಕೋಟೆಯ ಖಾಸಗಿ ಕಾಲೇಜಿನಲ್ಲಿ ಪದವಿ ಪಡೆದ ನಂತರ ಶರಣಮ್ಮ, ಕರ್ನಾಟಕ ವಿವಿಯಲ್ಲಿ ಬಾಹ್ಯ ವಿದ್ಯಾರ್ಥಿಯಾಗಿ ಸ್ನಾತಕೋತ್ತರ ಪದವಿ ಪಡೆದರು.
2009 ರಲ್ಲಿ ಪಂಚಾಯಿತಿ ಪಿಡಿಒ ಆಗಿ ಆಯ್ಕೆಯಾಗಿದ್ದರು, ಆದರೆ ತಹಶೀಲ್ದಾರ್ ಆಗಬೇಕೆನ್ನುವ ತಾಯಿಯ ಆಸೆಗಾಗಿ ಆ ಹುದ್ದೆಯನ್ನು ನಿರಾಕರಿಸಿದರು. 2009 ರಲ್ಲೇ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಶಿಕ್ಷಕ ಹುದ್ದೆಯನ್ನು ನಿರಾಕರಿಸಿದರು. ನಂತರ 2010 ರಲ್ಲಿ ಕೆಎಸ್ ಆರ್ ಟಿಸಿಯ ಸೂಪರಿಂಡೆಂಟ್ ಆಗಿ ಕಾರ್ಯ ನಿರ್ವಹಿಸದರು.
ನಂತರ 2011 ರಲ್ಲಿ ನಡೆದ ಕೆಪಿಎಸ್ ಸಿ ಪರೀಕ್ಷೆ ಬರೆದರು. ನಂತರ ವಾಣಿಜ್ಯ ತೆರಿಗೆ ಇಲಾಖೆಗೆ ಆಯ್ಕೆಯಾದರು, ಆದರೆ ಶರಣಮ್ಮ ಅದನ್ನು ನಿರಾಕರಿಸಿದರು. ಮತ್ತೆ 2014ರಲ್ಲಿ ನಡೆದ ಕೆಪಿಎಸ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 16ನೇ ರ್ಯಾಂಕ್ ಬಂದರು ಕಳೆದ ಏಪ್ರಿಲ್ ನಲ್ಲಿ ಫಲಿತಾಂಶ ಬಂದಿದ್ದು ಸದ್ಯ ಆಕೆ ತನ್ನ ತಾಯಿಯ ಆಸೆನ್ನು ಈಡೇರಿಸಿದ ಖುಷಿಯಲ್ಲಿದ್ದಾರೆ.
ನನ್ನ ತಾಯಿಯ ಬಯಕೆಯನ್ನು ಪೂರ್ಣಗೊಳಿಸಿದ್ದೇನೆ ಎಂಬ ಖುಷಿ ನನಗಿದೆ ಎಂದು ಶರಣಮ್ಮ ಹೇಳಿದ್ದಾರೆ. ತಮ್ಮ ಮಗಳ ಸಾಧನೆಗೆ ಹರ್ಷ ವ್ಯಕ್ತಪಡಿಸಿರುವ ಪೋಷಕರು ಜನರಿಗೆ ಪ್ರಾಮಾಣಿಕವಾಗಿ ಕೆಲಸ ಮಾಡಿಕೊಡಬೇಕೆಂದು ತಮ್ಮ ಮಗಳಿಗೆ ತಿಳಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos