ಬೆಳಗಾವಿ: ಇತ್ತೀಚೆಗೆ ನಡೆದ ಬೆಂಕಿ ದುರಂತದಲ್ಲಿ ಮನೆ ಕಳೆದುಕೊಂಡಿದ್ದ ರೈತನೊಬ್ಬ ಹಣಕಾಸಿನ ಒತ್ತಡದಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಗಾವಿಯ ಸವದತ್ತಿ ತಾಲೂಕಿನ ಹಂಚಿನಾಳದಲ್ಲಿ ನಡೆದಿದೆ.
ಹಂಚಿನಾಳ ಗ್ರಾಮದ ಈರಪ್ಪ ರಾಮಚಂದ್ರ ಕಂಬಾರ್ ಮೃತ ದುರ್ದೈವಿ. ಕಂಬಾರ್ 3 ಎಕರೆ ಜಮೀನು ಹೊಂದಿದ್ದರು, ಜೊತೆಗೆ ಕೃಷಿಗಾಗಿ 2 ಲಕ್ಷ ರು ಸಾಲ ಪಡೆದಿದ್ದರು. ಬರದಿಂದಾಗಿ ಕಂಬಾರ್ ಬೆಳೆದಿದ್ದ ಬೆಳೆ ನಷ್ಟವಾಗಿತ್ತು, ಇದರಿಂದ ಅವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು.
ಇತ್ತೀಚೆಗೆ ಹಂಚಿನಾಳ ಗ್ರಾಮದಲ್ಲಿ ನಡೆದ ಬೆಂಕಿ ದುರಂತದಲ್ಲಿ ಈರಪ್ಪ ಕಂಬಾರ್ ತಮ್ಮ ಮನೆ ಕಳೆದು ಕೊಂಡಿದ್ದರು. ಇದೆಲ್ಲದರ ನಡುವೆ ಬ್ಯಾಂಕ್ ನವರು ಮತ್ತು ಸ್ಥಳೀಯ ಹಣಕಾಸು ಸಂಸ್ಥೆಗಳು ಹಣ ಪಾವತಿಸುವಂತೆ ಒತ್ತಡ ಹೇರುತ್ತಿದ್ದರು, ಹೀಗಾಗಿ ಮಾಡಿದ ಸಾಲ ತೀರಿಸಲಾಗದೇ ಈರಪ್ಪ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ, ಈ ಸಂಬಂಧ ಸವದತ್ತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.