ರಾಜ್ಯ

ಬೆಂಗಳೂರು: 30 ಲಕ್ಷ ರು. ಮೌಲ್ಯದ ಚಿನ್ನಾಭರಣ ಧರಿಸಿದ್ದ ಫೈನಾನ್ಷಿಯರ್ 'ಗೋಲ್ಡನ್' ಸುರೇಶ್ ಹತ್ಯೆ

Shilpa D
ಬೆಂಗಳೂರು: ಫೈನಾನ್ಷಿಯರ್ ಹಾಗೂ ರಿಯಲ್ ಎಸ್ಟೇಟ್ ನಡೆಸುತ್ತಿದ್ದ ವ್ಯಕ್ತಿಯನ್ನು ಆತನ ಅಪಾರ್ಟ್ ಮೆಂಟ್ ನಲ್ಲೇ ಕತ್ತು ಸೀಳಿ ಕೊಂದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಜಯನಗರ 7ನೇ ಬ್ಲಾಕ್ ಅಪಾರ್ಟ್ ಮೆಂಟ್ ವೊಂದರಲ್ಲಿ ವಾಸವಾಗಿದ್ದ ಕುಂದಾಪುರ ಮೂಲದ ಸುರೇಶ್ ಪೂಜಾರಿ ಅಲಿಯಾಸ್ ಗೋಲ್ಡನ್ ಸುರೇಶ್ ಕೊಲೆಯಾದ ವ್ಯಕ್ತಿ.
ಜಯನಗದರ ಜೆಎಸ್ ಎಸ್ ಸರ್ಕಲ್ ಬಳಿಯಿರುವ ಅಪಾರ್ಟ್ ಮೆಂಟ್ ನಲ್ಲಿ ಸುರೇಶ್ ಕಳೆದ ಒಂದೂವರೆ ವರ್ಷದಿಂದ ಬಾಡಿಗೆಗಿದ್ದರು, ಇಲ್ಲಿಯೇ ತಮ್ಮ ಹಣಕಾಸು ವ್ಯವಹಾರ ಮತ್ತು ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದರು.
ಸುರೇಶ್ ಸಹೋದರಿ ಆತನಿಗೆ ಕರೆ ಮಾಡಿದ್ದಾರೆ. ಸತತ ಕರೆಯ ನಂತರವೂ ಫೋನ್ ರಿಸೀವ್ ಮಾಡಿದಿದ್ದ ಹಿನ್ನೆಲೆಯಲ್ಲಿ ಆಕೆ ಅಪಾರ್ಟ್ ಮೆಂಟ್ ಗೆ ಬಂದಿದ್ದಾರೆ. ಮನೆಯ ಒಳಗೆ ಮೊಬೈಲ್ ರಿಂಗ್ ಆಗುತ್ತಿತ್ತು, ನಂತರ ನೆರೆಹೊರೆಯವರ ಸಹಾಯದಿಂದ ಬಾಗಿಲು ತೆರೆದು ನೋಡಿದಾಗ ಸುರೇಶ್ ಮೃತ ದೇಹ ಪತ್ತೆಯಾಗಿದೆ.
ನಂತರ ಸ್ಥಳಕ್ಕೆ ಬಂದ ಪೊಲೀಸರು ತನಿಖೆ ನಡೆಸಿದ್ದಾರೆ. ಪರಿಚಯಸ್ಥರೇ ಸುರೇಶ್ ಕತ್ತು ಸೀಳಿ ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.
ಸುರೇಶ್ ವಿರುದ್ಧ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಅಪಹರಣ, ಬೆದರಿಕೆ ಸೇರಿದಂತೆ ಹಲವು ದೂರುಗಳು ದಾಖಲಾಗಿದ್ದವು, ಜೊತೆಗೆ ನಗರದ ಹಲವು ರೌಡಿಗಳ ಜೊತೆ ಸಂಪರ್ಕ ಇಟ್ಟುಕೊಂಡಿದ್ದ ಸುರೇಶ. ರೌಡಿ ಶೀಟರ್ ಹೆಬ್ಬೆಟ್ಟು ಮಂಜನ ಸಹಚರನಾಗಿದ್ದ. ಇವನನ್ನು ಗೋಲ್ಡನ್ ಸುರೇಶ ಎಂಬ ಅಡ್ಡ ಹೆಸರಿನಿಂದ ಕರೆಯಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಆತ ಸಾಯುವಾಗಲು 30 ಲಕ್ಷ ರು ಮೌಲ್ಯದ ಚಿನ್ನಭಾರಣ ಧರಿಸಿದ್ದ. ಮಂಗಳವಾರ ರಾತ್ರಿ ನಡೆದ ಪಾರ್ಟಿಯಲ್ಲಿ ಸುರೇಶ್ ಸ್ನೇಹಿತರ ಜೊತೆ ಕಾಣಿಸಿಕೊಂಡಿದ್ದ, ಪ್ರಕರಣ ದಾಖಲಿಸಿಕೊಂಡಿರುವ ಜಯನಗರ ಪೊಲಿಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
SCROLL FOR NEXT