ಬೆಂಗಳೂರು: ತಮ್ಮ ವಿರುದ್ಧ ಷಡ್ಯಂತ್ರ ರೂಪಿಸಲು ಕೇಂದ್ರ ಸರ್ಕಾರ ಸಿಬಿಐಯನ್ನು ಬಳಸಿಕೊಳ್ಳುತ್ತಿದೆ ಎಂಬ ಮಾಜಿ ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಅವರ ಆರೋಪವನ್ನು ತಳ್ಳಿ ಹಾಕಿರುವ ಭಾರತೀಯ ಜನತಾ ಪಕ್ಷ, ಕಪ್ಪು ಹಣ ಮತ್ತು ಭ್ರಷ್ಟಾಚಾರವನ್ನು ತಡೆಗಟ್ಟಲು ಸಿಬಿಐ ಸಂಸ್ಥೆ ತನ್ನ ಕೆಲಸವನ್ನು ಮಾಡುತ್ತಿದೆ ಎಂದು ಸ್ಪಷ್ಟಪಡಿಸಿದೆ.
ಕೇಂದ್ರ ಸಚಿವ ಅನಂತ್ ಕುಮಾರ್ ಇಂದು ಬೆಂಗಳೂರಿನಲ್ಲಿ ಮಾತನಾಡಿ, ಅಕ್ರಮ ಹಣ, ಕಪ್ಪು ಹಣ ಮತ್ತು ಭ್ರಷ್ಟಾಚಾರದ ಬಗ್ಗೆ ಮಾಹಿತಿ ಸಿಕ್ಕಿದರೆ ಸಿಬಿಐ ತನಿಖಾ ಸಂಸ್ಥೆ ತನಿಖೆ ಮಾಡಲು ಆರಂಭಿಸುತ್ತದೆ ಎಂದರು.
ಸಿಬಿಐ ಸಂಸ್ಥೆ ಅನೇಕ ವರ್ಷಗಳಿಂದ ಈ ಕೆಲಸ ಮಾಡುತ್ತಿದೆ. ಇದು ಭ್ರಷ್ಟಾಚಾರ ಮತ್ತು ಕಪ್ಪು ಹಣವನ್ನು ನಿಯಂತ್ರಿಸಲು ಹೊರತು ಇದರ ಹಿಂದೆ ಬಿಜೆಪಿಯ ಕೈವಾಡವಿಲ್ಲ ಎಂದು ಹೇಳಿದರು.
ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ತೊಡೆದುಹಾಕಲು ಅದರ ವಿರುದ್ಧ ಕೇಂದ್ರ ಸರ್ಕಾರ ಹೋರಾಡುತ್ತದೆ ಎಂದು ಮತ್ತೊಬ್ಬ ಕೇಂದ್ರ ಸಚಿವ ಬಂಡಾರು ದತ್ತಾತ್ರೇಯ ತಿಳಿಸಿದರು.
ಮೋದಿ ಸರ್ಕಾರ ಆಡಳಿತ ಪಕ್ಷ, ಪ್ರತಿಪಕ್ಷ ಅಥವಾ ಬೇರೊಬ್ಬರು ಎಂದು ವ್ಯತ್ಯಾಸ ಮಾಡುವುದಿಲ್ಲ. ಭ್ರಷ್ಟಾಚಾರವನ್ನು ಕಿತ್ತೊಗೆಯಲು ಪ್ರಯತ್ನ ಮಾಡುತ್ತಿದೆಯಷ್ಟೆ ಎಂದು ದತ್ತಾತ್ರೇಯ ಹೇಳಿದರು.
ಈ ಮಧ್ಯೆ ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ ಅವರನ್ನು ಚೆನ್ನೈನ ಅವರ ನಿವಾಸದಲ್ಲಿ ಸಿಬಿಐ ವಿಚಾರಣೆ ನಡೆಸಿದೆ.
ಕಾರ್ತಿ ಹಾಗೂ ಐಎನ್ಎಕ್ಸ್ ಮೀಡಿಯಾದ ಮಾಜಿ ನಿರ್ದೇಶಕ ಪೀಟರ್ ಮುಖರ್ಜಿ ಪತ್ನಿ ಇಂದ್ರಾಣಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಪೀಟರ್ ಮುಖರ್ಜಿ ಅವರ ನಿವಾಸದ ಮೇಲೆ ಕೂಡ ಸಿಬಿಐ ದಾಳಿ ನಡೆಸಿತು.
ವರದಿಯೊಂದರ ಪ್ರಕಾರ ದೇಶದ 15 ಕಡೆಗಳಲ್ಲಿ ಸಿಬಿಐ ದಾಳಿ ನಡೆಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics