ಶಿವಮೊಗ್ಗ: ಮಗಳ ನಾಮಕರಣಕ್ಕೆಂದು ಬೈಕ್ ನಲ್ಲಿ ತೆರಳಿ ಹಿಂದಿರುಗುವ ವೇಳೆ ಬಸ್ ಢಿಕ್ಕಿಯಾದ ಪರಿಣಾಮ ತಂದೆ ಮತ್ತು ಅವರ ಸಹೋದರ ಮೃತಪಟ್ಟಿರುವ ಘಟನೆ ಶಿವಮೊಗ್ಗದಲ್ಲಿ ಮಂಗಳವಾರ ತಡರಾತ್ರಿ ಸಂಭವಿಸಿದೆ.
ಮೃತರನ್ನು ಜಗದೀಶ್ ಹಾಗೂ ಲೋಕೇಶ್ ಎಂದು ಗುರುತಿಸಲಾಗಿದ್ದು, ಮೂಲಗಳ ಪ್ರಕಾರ ಲೋಕೇಶ್ ಎಂಬವರ ಮೂರು ತಿಂಗಳ ಮಗುವಿನ ನಾಮಕರಣಕ್ಕಾಗಿ ವೀರಗೊಂಡನ ಹಳ್ಳಿಯಲ್ಲಿರುವ ಹೆಂಡತಿ ಮನೆಗೆ ಇಬ್ಬರು ಸಹೋದರರು ಹೋಗಿದ್ದರು. ನಾಮಕರಣ ಮುಗಿಸಿಕೊಂಡು ಶಿವಮೊಗ್ಗಕ್ಕೆ ಬೈಕ್ ನಲ್ಲಿ ವಾಪಸ್ ಆಗುತ್ತಿದ್ದಾಗ ಶಿವಮೊಗ್ಗ- ಸಾಗರ ರಸ್ತೆಯ ಮುದ್ದಿನಕೊಪ್ಪ ಎಂಬಲ್ಲಿ ಶಿಕಾರಿಪುರಕ್ಕೆ ಹೋಗುತ್ತಿದ್ದ ಬಸ್ ಬೈಕಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಇಬ್ಬರೂ ಸಹೋದರರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಡಿಕ್ಕಿಯಾದ ರಭಸಕ್ಕೆ ಬಸ್ಸಿನ ಟ್ಯಾಂಕರ್ ಗೆ ಬೈಕ್ ತಗುಲಿ ಬೆಂಕಿ ಹೊತ್ತಿದೆ. ಹೀಗಾಗಿ ಬಸ್ ಸಂಪೂರ್ಣ ಸುಟ್ಟು ಹೋಗಿದ್ದು, ಬಸ್ಸಿಗೆ ಬೆಂಕಿ ತಗುಲಿದ ತಕ್ಷಣ ಪ್ರಯಾಣಿಕರು ಕೆಳಗಿಳಿದಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳಕ್ಕೆ ಶಿವಮೊಗ್ಗ ಎಸ್‍ಪಿ ಅಭಿನವ್ ಖರೆ ಹಾಗೂ ಇನ್ನಿತರ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.