ರಾಜ್ಯ

ಗಣಿ ಪ್ರಕರಣ: 2 ಗಂಟೆಗಳ ಕಾಲ ಹೆಚ್.ಡಿ. ಕುಮಾರಸ್ವಾಮಿ ವಿಚಾರಣೆ

Manjula VN
ಬೆಂಗಳೂರು: ಜಂತಕಲ್ ಮೈನಿಂಗ್ ಸಂಸ್ಥೆಗೆ ಪರವಾನಗಿ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮತ್ರಿ ಹೆಚ್.ಡಿ. ಕುಮಾರಸ್ವಾಮಿಯವರು ಲೋಕಾಯುಕ್ತ ವಿಶೇಷ ತನಿಖಾ ತಂಡದ ಮುಂದೆ ಹಾಜರಾಗಿ ವಿಚಾರಣೆ ಎದುರಿಸಿದರು. 
ಹೆಬ್ಬಾಳದಲ್ಲಿನ ಎಸ್ಐಟಿ ಕಚೇರಿಗೆ ಮಧ್ಯಾಹ್ನ 12.30ರ ಸುಮಾರಿಗೆ ತೆರಳಿದ ಕುಮಾರಸ್ವಾಮಿ ಅವರನ್ನು ಅಧಿಕಾರಿಗಳು ಎರಡು ಗಂಟೆಗಳ ವಿಚಾರಣೆಗೊಳಪಡಿಸಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಐಎಎಸ್ ಅಧಿಕಾರಿ ಗಂಗಾರಾಮ್ ಬಡೇರಿಯಾ ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ. ವಿಚಾರಣೆ ವೇಳೆ ಅಂದಿನ ಮುಖ್ಯಮಂತ್ರಿಯಾಗಿದ್ದ ಹೆಚ್.ಡಿ.ಕುಮಾರಸ್ವಾಮಿ ಅವರ ಒತ್ತಡಕ್ಕೆ ಮಣಿದು ಪರವಾನಗಿಗೆ ಸಹಿ ಹಾಕಲಾಯಿತು. ಒತ್ತಡದಿಂದ ಅನುಮತಿ ನೀಡಲಾಗಿದೆ ಎಂದು ಕಡತವೊಂದರಲ್ಲಿ ಬಟೇರಿಯಾ ಉಲ್ಲೇಖಿಸಿದ್ದರು. ಹೀಗಾಗಿ ಕುಮಾರಸ್ವಾಮಿಯವರನ್ನು ವಿಚಾರಣೆ ನಡೆಸಿ ಹಲವು ಮಾಹಿತಿಗಳನ್ನು ಎಸ್ಐಟಿ ಅಧಿಕಾರಿಗಳು ಪಡೆದುಕೊಂಡಿದ್ದಾರೆಂದು ಮೂಲಗಳು ತಿಳಿಸಿವೆ. 
ವಿಚಾರಣೆಗೊಳಗಾದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿಯವರು, ವಿಚಾರಣೆ ವೇಳೆ ನನ್ನ ವಿರುದ್ಧದ ಎಲ್ಲಾ ಆರೋಪಗಳನ್ನು ತಳ್ಳಿಹಾಕಿದ್ದೇನೆ. ನಾನು ಈ ವಿಚಾರದಲ್ಲಿ ಭಾಗಿಯಾಗಿಲ್ಲ. ಯಾವುದೇ ಅಧಿಕಾರಿಗಳ ಮೇಲೆ ನಾನು ಯಾವುದೇ ರೀತಿಯ ಒತ್ತಡಗಳನ್ನು ಹೇರಿರಲಿಲ್ಲ. ಗಣಿ ವಿಚಾರದಲ್ಲಿ ವೈಯಕ್ತಿಯ ಆಸಕ್ತಿಯೂ ಇಲ್ಲ. ಹೀಗಿರುವಾಗ ಅಕ್ರಮವಾಗಿ ಅನುಮತಿ ನೀಡುವಂತೆ ನಾನೇಕ ಅಧಿಕಾರಿಗಳಿಗೆ ತಿಳಿಸಲಿ? ಎಂದು ಹೇಳಿದ್ದಾರೆ. 
ಎಸ್ಐಟಿ ಅಧಿಕಾರಿಗಳು ಕೇಳಿದ ಎಲ್ಲಾ ಪ್ರಶ್ನೆಗಳಿಗೂ ನಾನು ಉತ್ತರ ನೀಡಿದ್ದೇನೆ. ವಿಚಾರಣೆ ವೇಳೆ ಯಾವಾಗ ಅಗತ್ಯವೆಸಿದರೂ ಆಗ ವಿಚಾರಣೆಗೊಳಗಾಗುವುದಾಗಿ ತಿಳಿಸಿದ್ದೇನೆ. ಆದೇಶ ಪಾಲನೆ ಮಾಡಲೂ ವಿಚಾರಣೆ ಮುನ್ನ ಮಾಹಿತಿ ನೀಡುವಂತೆ ತಿಳಿಸಿದ್ದೇನೆಂದು ತಿಳಿಸಿದ್ದಾರೆ. 
ಇದೇ ವೇಳೆ ಅಧಿಕಾರಿಗಳು ಕೇಳಿದ ಪ್ರಶ್ನೆಗಳ ಕುರಿತಂತೆ ಮಾಹಿತಿ ನೀಡಲು ನಿರಾಕರಿಸಿರುವ ಅವರು, ಅಧಿಕಾರಿಗಳು ಕೇಳಿದ ಪ್ರಶ್ನೆಗಳನ್ನು ನಾನು ಬಹಿರಂಗ ಪಡಿಸುವುದಿಲ್ಲ. ಈಗಾಗಲೇ ಅವರ ಪ್ರಶ್ನೆಗಳಿಗೆ ನಾನು ಉತ್ತರ ನೀಡಿದ್ದೇನೆಂದು ಹೇಳಿದ್ದಾರೆ. 
SCROLL FOR NEXT