ಬೆಂಗಳೂರು: ಜೂನ್ ವೇಳೆ ನಮ್ಮ ಮೆಟ್ರೋ ಮೊದಹ ಹಂತದ ಕಾರ್ಯಗಳು ಸಂಪೂರ್ಣಗೊಳ್ಳಲಿದ್ದು, ಶೀಘ್ರದಲ್ಲಿಯೇ ಸಂಚಾರ ಆರಂಭಿಸಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಹೇಳಿದ್ದಾರೆ.
ಜಲಮಂಡಳಿ ವತಿಯಿಂದ ಕೊಳೆಗೇರಿಗಳಿಗೆ ಉಚಿತ ಕುಡಿಯುವ ನೀರಿನ ಯೋಜನೆಗೆ ಶ್ರೀರಾಂಪುರದ ಡಾ.ಬಿ.ಆರ್.ಅಂಬೇಡ್ಕರ್ ಆಟದ ಮೈದಾನದಲ್ಲಿ ಶುಕ್ರವಾರ ಚಾಲನೆ ನೀಡಿ ಮಾತನಾಡಿರುವ ಅವರು, ನಗರದಲ್ಲಿ ಎದುರಾಗಿರುವ ಸಂಚಾರ ಸಮಸ್ಯೆಗಳ ಕುರಿತಂತೆ ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳ ಕುರಿತಂತೆ ವಿವರಣೆ ನೀಡಿದರು.
ಪ್ರಸ್ತು ಬೆಂಗಳೂರಿನಲ್ಲಿ 65ಲಕ್ಷಕ್ಕೂ ಹೆಚ್ಚು ವಾಹನಗಳಿದ್ದು, ಸಂಚಾರ ಸಮಸ್ಯೆ ಬಗೆಹರಿಸಲು 42.3 ಕಿಮೀ ಗಳವರೆಗೂ ರೂ.13,600 ಕೋಟಿ ವೆಚ್ಚದಲ್ಲಿ ಮೊದಲ ಹಂತದ ಮೆಟ್ರೋ ಮಾರ್ಗವನ್ನು ನಿರ್ಮಿಸಲಾಗಿದೆ. ಈಗಾಗಲೇ ಇದರ ಕಾರ್ಯಗಳು ಪೂರ್ಣಗೊಂಡಿದೆ. ಪ್ರಸ್ತುತ ಮೆಟ್ರೋ ರೈಲುಗಳು ಸುಮಾರು 2 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರಿಗೆ ಸಹಾಯಕವಾಗಿವೆ. ಇದೀಗ ಮೊದಲ ಹಂತದ ಮೆಟ್ರೋ ಕಾಮಗಾರಿ ಪೂರ್ಣಗೊಂಡಿರುವ ಹಿನ್ನಲೆಯಲ್ಲಿ ಇದು 5 ಲಕ್ಷ ಪ್ರಯಾಣಿಕರನ್ನು ಹೊತ್ತೊಯ್ಯಲಿದೆ. ಎರಡನೇ ಹಂತದ ಮೆಟ್ರೋ ಮಾರ್ಗವನ್ನು ರೂ.26,000 ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದ್ದು, ಈಗಾಗಲೇ ಇದರ ಕಾಮಗಾರಿ ಕೆಲಸಗಳೂ ಕೂಡ ಆರಂಭಗೊಂಡಿದೆ ಎಂದು ಹೇಳಿದ್ದಾರೆ.
ಇದಲ್ಲದೆ ಬೆಂಗಳೂರಿಗೆ ಸಹಾಯಕವಾಗಲೆಂದು 1,000 ಹೊಸ ಬಿಎಂಟಿಸಿ ಬಸ್ ಗಳನ್ನು ಬಿಡಲಾಗಿದೆ. ಇತ್ತೀಚೆಗಷ್ಟೇ ರೈಲ್ವೆ ಸಚಿವರು ನಗರಕ್ಕೆ ಆಗಮಿಸಿದಾಗ ಅವರೊಂದಿಗೆ ಸರ್ಕ್ಯೂಟ್ ರೈಲುಗಳ ಕುರಿತಂತೆಯೂ ಮಾತುಕತೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.
ನಂತರ ಕೊಳೆಗೇರಿ ನಿವಾಸಿಗಳಿಗೆ ಉಚಿತ ಕುಡಿಯುವ ನೀರಿನ ಯೋಜನೆ ಕುರಿತಂತೆ ಮಾತನಾಡಿದ ಅವರು, ನಗರದಲ್ಲಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಾಲೋನಿಗಳಿಗೂ ಉಚಿತ ಕುಡಿಯುವ ನೀರನ್ನು ಒದಗಿತುತ್ತೇವೆ. ಪರಿಶಿಷ್ಟರ ಸ್ಥಿತಿ ದಯನೀಯವಾಗಿದ್ದು, ಅವರಿಗಾಗಿ ಸದಾ ನೆರವು ನೀಡಲು ಸಿದ್ಧರಿದ್ದೇವೆ. ಕಾಲೋನಿಗಳು ಹೊಂದಿರುವ ನೀರಿನ ಸಂಪರ್ಕಗಳ ಬಗ್ಗೆ ಸಮೀಕ್ಷೆ ನಡೆಸುವಂತೆ ಜಲಮಂಡಳಿ ಅಧ್ಯಕ್ಷರಿಗೆ ಸೂಚಿಸಿದ್ದೇನೆ. ಸಮೀಕ್ಷಾ ವರದಿ ಬಂದ ಬಳಿಕ ನೀರಿನ ಬಿಲ್ ನ ಬಾಕಿ ಮನ್ನಾ ಮಾಡುತ್ತೇವೆ ಹಾಗೂ ಉಚಿತವಾಗಿ ನೀರು ಒದಗಿಸುತ್ತೇವೆಂದು ಹೇಳಿದರು.
10,000 ಲೀಟರ್ ನೀರಿಗೆ ರೂ.148 ವೆಚ್ಚವಾಗುತ್ತದೆ. ಕೊಳಗೇರಿಗಳ ಎಲ್ಲಾ ಮನೆಗಳಿಗೆ ನೀರು ಪೂರೈಸಲು ತಿಂಗಳಿಗೆ ರು.1.05 ಕೋಟಿ ವೆಚ್ಚ ತಗುಲುತ್ತದೆ. ಇದಕ್ಕಾಗಿ ಜಲಮಂಡಳಿಗೆ ರು.12.60 ಕೋಟಿ ಅನುದಾನ ನೀಡಲಾಗಿದೆ. 100 ಹಳ್ಳಿಗಳಿಗೂ ಕಾವೇರಿ ನೀರು ಪೂರೈಸುವ ಯೋಜನೆಗೆ ಕಳೆದ ತಿಂಗಳು ಚಾಲನೆ ನೀಡಲಾಗಿತ್ತು. ಈ ಕಾಮಗಾರಿ 2 ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.
ಪ್ರತೀ ಮನೆಗೂ 10,000 ಲೀಟರ್ ಉಚಿತ ನೀರು
ಬಿಡಬ್ಲ್ಯೂಎಸ್ಎಸ್'ಬಿ ಪ್ರತೀ ಮನೆಗೂ 10,000 ಲೀಟರ್ ನೀರನ್ನು ಉಚಿತವನಾಗಿ ನೀಡಲಿದೆ. ಇದಕ್ಕೂ ಹೆಚ್ಚು ನೀರನ್ನು ಬಳಸಿದ್ದೇ ಆದರೆ, ನಂತರ ಬಿಲ್ ಕಟ್ಟಬೇಕಾಗುತ್ತದೆ ಎಂದು ಬಿಡಬ್ಲ್ಯೂಎಸ್ಎಸ್'ಬಿ ಇಂಜಿನಿಯರ್ ಮುಖ್ಯಸ್ಥ ಕೆಂಪರಾಮಯ್ಯ ಅವರು ಹೇಳಿದ್ದಾರೆ.