ಬೆಂಗಳೂರು: ರೈತರ ತೀವ್ರ ಹೋರಾಟಕ್ಕೆ ಕಾರಣವಾಗಿರುವ ಮಹದಾಯಿ ವಿವಾದ ಪರಿಷ್ಕರಿಸುವ ಸಂಬಂಧ ಮತ್ತೆ ಸಭೆ ನಡೆಸುವಂತೆ ಸಿಎಂ ಸಿದ್ದರಾಮಯ್ಯ ಗೋವಾ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ ಎಂದು ತಿಳಿದುಬಂದಿದೆ.
ಈ ಹಿಂದೆ ಕರೆಯಲಾಗಿದ್ದ ಸಭೆ ಗೋವಾ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಮುಂದೂಡಲ್ಪಟ್ಟಿತ್ತು. ಇದೀಗ ಸಭೆಗೆ ತಪ್ಪದೇ ಬರುವಂತೆ ಸಿಎಂ ಸಿದ್ದರಾಮಯ್ಯ ಗೋವಾ ಸಿಎಂ ಮನೋಹರ್ ಪರಿಕ್ಕರ್ ಹಾಗೂ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಅವರಿಗೆ ಪತ್ರ ಬರೆದಿದ್ದಾರೆ. ಮೂಲಗಳ ಪ್ರಕಾರ ಇದೇ ಜೂನ್ ತಿಂಗಳಲ್ಲಿ ಮಹದಾಯಿ ಸಭೆ ನಡೆಯಲಿದೆ ಎಂದು ಹೇಳಲಾಗುತ್ತಿದೆ.
ಉಭಯ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಸಿಎಂ ಸಿದ್ದರಾಮಯ್ಯ ಅವರು, ಮಹದಾಯಿ ವಿವಾದ ಸಂಬಂಧ ಚರ್ಚೆ ನಡೆಸಲು ಜೂನ್ ತಿಂಗಳಲ್ಲಿ ಸಮಯ ಮಾಡಿಕೊಂಡು ಸಭೆಗೆ ಆಗಮಿಸುವಂತೆ ಆಹ್ವಾನ ನೀಡಿದ್ದಾರೆ. ಕರ್ನಾಟಕ ಕೊಳ್ಳದ ಜನತೆ ಮತ್ತೆ ಯಾವಾಗ ಸಭೆ ನಡೆಯುತ್ತದೆ ಎಂದು ಕಾತುರದಿಂದ ಕಾಯುತ್ತಿದ್ದಾರೆ. ಹೀಗಾಗಿ ಮಹದಾಯಿ ಕೊಳ್ಳದ ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಜೂನ್ ನಲ್ಲಿ ಸಭೆ ಸೇರಿ ಚರ್ಚಿಸಲು ಬೆಂಗಳೂರಿಗೆ ಬರುವಂತೆ ಮನವಿ ಮಾಡುತ್ತಿದ್ದೇನೆ. ಸಭೆಯ ಕುರಿತು ಹೆಚ್ಚಿನ ವಿವರಗಳನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಭಾಷ್ ಚಂದ್ರ ಕುಂಟಿಯಾ ಅವರು ಗೋವಾ ಮತ್ತು ಮಹಾರಾಷ್ಟ್ರ ಸರ್ಕಾರಗಳ ಮುಖ್ಯ ಕಾರ್ಯದರ್ಶಿಗಳ ಜೊತೆ ಚರ್ಚಿಸಿ ಮಾಹಿತಿ ನೀಡುತ್ತಾರೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.
2016ರಲ್ಲಿ ಮಹದಾಯಿ ನ್ಯಾಯಾಧಿಕರಣ ಪರಸ್ಪರ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಸೂಚನೆ ನೀಡಿತ್ತು. ಅದರಂತೆ 2016ರ ಅಕ್ಟೋಬರ್ 21ರಂದು ಮುಂಬೈ ನಲ್ಲಿ ಸಭೆ ಸೇರಲಾಗಿತ್ತು. ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವಿಸ್ ಅವರ ನೇತೃತ್ವದಲ್ಲಿ ನಡೆ ಸಭೆಯಲ್ಲಿ ಅಂದಿನ ಗೋವಾ ಸಿಎಂ ಲಕ್ಷ್ಮೀಕಾಂತ್ ಪರ್ಸೇಕರ್ ಅವರು ಗೈರಾಗಿದ್ದರು. ಹೀಗಾಗಿ ಅಂದಿನ ಸಭೆಯನ್ನು ರದ್ದುಗೊಳಿಸಲಾಗಿತ್ತು.